ಒಂದೇ ದಿನದಲ್ಲಿ 50 ಸಾವಿರ ಮಂದಿಗೆ ಸೋಂಕು

ನವದೆಹಲಿ, ಮಾ.೨೫- ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆಯ ಆರ್ಭಟ ಹೆಚ್ಚಾಗುತ್ತಿದ್ದು ಸೋಂಕು ಪ್ರಕರಣ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿರುವ ನಡುವೆ ಕಳೆದ ಐದು ತಿಂಗಳ ಬಳಿಕ ದಾಖಲೆಯ ಸೋಂಕು ಏರಿಕೆಯಾಗಿದೆ.
ಈ ವರ್ಷದಲ್ಲಿ ಮೊದಲ ಬಾರಿಗೆ ೫೦ ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ಕಾಣಿಸಿಕೊಂಡಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಬೆಚ್ಚಿ ಬೀಳಿಸಿದೆ.
ಇಂದು ಬೆಳಗ್ಗೆ ೮ ಗಂಟೆಯ ತನಕ ೫೩,೪೭೬ ಮಂದಿಗೆ ಹೊಸದಾಗಿ ಸೋಂಕು ಧೃಡಪಟ್ಟಿದೆ. ಇದರೊಂದಿಗೆ ಕಳೆದ ಐದು ತಿಂಗಳ ಬಳಿಕ ದೇಶದಲ್ಲಿ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿದೆ. ನಿನ್ನೆ ದೇಶದಲ್ಲಿ ದಾಖಲಾಗಿದ್ದ ಸೋಂಕಿನ ಪೈಕಿ ಇಂದು ನಿರೀಕ್ಷೆಗೂ ಮೀರಿ ಸೋಂಕು ಹೆಚ್ಚಾಗಿದೆ.
ಕಳೆದ ೨೪ ಗಂಟೆಗಳಲ್ಲಿ ೨೫೧ ಮಂದಿ ಮೃತಪಟ್ಟಿದ್ದಾರೆ. ಇದು ಈ ವರ್ಷದಲ್ಲಿ ದಾಖಲೆಯಾಗಿದೆ. ಹೊಸದಾಗಿ
೨೬,೪೯೦ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ದೇಶದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಪ್ರಕರಣಗಳೊಂದಿಗೆ ದೇಶದಲ್ಲಿ ಒಟ್ಟಾರೆ ಸೋಂಕು ಸಂಖ್ಯೆ ೧,೧೭,೮೭,೫೩೪ ಏರಿಕೆಯಾಗಿದೆ. ಇದುವೆರೆಗೆ ದೇಶದಲ್ಲಿ ೧,೧೨,೩೧,೬೫೦ ಮಂದಿ ಗುಣಮುಖರಾಗಿದ್ದಾರೆ. ಜೊತೆಗೆ ಇಲ್ಲಿಯವರೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ೧,೬೦,೬೯೨ ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ
೪ ಲಕ್ಷ ಗಡಿಯಲ್ಲಿ ಸಕ್ರಿಯ ಪ್ರಕರಣ:
ದೇಶದಲ್ಲಿ ನಿತ್ಯ ಸೋಂಕು ಪ್ರಕರಣ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಮತ್ತು ಸಕ್ರಿಯ ಪ್ರಕರಣ ಗಣನೀಯವಾಗಿ ಹೆಚ್ಚಳವಾಗಿದೆ.
ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ಹರಿಯಾಣ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯದಲ್ಲಿ ಸೋಂಕು ನಿತ್ಯ ಏರಿಕೆಯಾಗುತ್ತಿದೆ. ಹೀಗಾಗಿ ಸಕ್ರಿಯ ಪ್ರಕರಣ ಗಣನೀಯವಾಗಿ ಹೆಚ್ಚಾಗಿದೆ.
ಸದ್ಯ ದೇಶದಲ್ಲಿ ೩,೯೫,೧೯೨ ಸಕ್ರಿಯ ಪ್ರಕರಣಗಳಿವೆ. ಫೆಬ್ರವರಿ ಮದ್ಯ ಭಾಗದಿಂದ ಮಾರ್ಚ್ ಕೊನೆಯವಾರದವರೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ೨.೫ ಲಕ್ಷ ಹೆಚ್ಚಾಗಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ ದೇಶದಲ್ಲಿ ಒಟ್ಟಾರೆ ಸೋಂಕಿನ ಪೈಕಿ ಶೇ.೩.೧೪ ಕ್ಕೆ ಏರಿಕೆಯಾಗಿದೆ

೫.೩೧ ಕೋಟಿಗೆ ಲಸಿಕೆ

ದೇಶದಲ್ಲಿ ಇದುವರೆಗೆ ೫ ಕೋಟಿಗೂ ಹೆಚ್ಚು ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ನಿನ್ನೆ ಸಂಜೆ ತನಕ ದೇಶದಲ್ಲಿ ೫,೩೧,೪೫,೭೦೯ ಮಂದಿಗೆ ಕೊರೋನಾ ಸೋಂಕಿನ ಲಸಿಕೆ ಹಾಕಲಾಗಿದೆ .ಈ ಪ್ರಮಾಣ ನಿತ್ಯ ಏರಿಕೆಯಾಗುತ್ತಿದೆ .

ಐದು ತಿಂಗಳ ಬಳಿಕ ಹೆಚ್ಚು

ದೇಶದಲ್ಲಿ ದಾಖಲಾಗಿರುವ ಹೊಸ ಸೋಂಕು ಐದು ತಿಂಗಳ ಬಳಿಕ ಅತಿ ಹೆಚ್ಚಿನ ಮಂದಿಗೆ ದೃಢಪಟ್ಟಿದೆ.

ಅಕ್ಟೋಬರ್ ೨೩ ರಂದು ಹೆಚ್ಚಿನ ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು. ಅದಾದ ಬಳಿಕ ಈಗ ಸೋಂಕು ಹೆಚ್ಚಾಗಿದೆ .

ನಿತ್ಯ ಸೋಂಕು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿನ ಚೇತರಿಕೆ ಪ್ರಮಾಣ ಶೇ.೯೫.೪೯ ಕ್ಕೆ ಕುಸಿದೆ.
ಸೋಂಕಿನಿಂದ ಸಾವನ್ನಪ್ಪುತ್ತಿರುವ ಪ್ರಮಾಣ ಶೇ. ೧.೩೭ ಕ್ಕೆ ಹೆಚ್ಚಾಗಿದೆ ಎಂದು ಸಚಿವಾಲಯ ತಿಳಿಸಿದೆ.