ಒಂದೇ ತಿಂಗಳಿನಲ್ಲಿ 32.89 ಕೋಟಿ ಪ್ರಯಾಣಿಕರು ಸಂಚಾರ: ದಾಖಲೆ ಬರೆದ ಸರ್ಕಾರದ ಮೊದಲ ಗ್ಯಾರಂಟಿ ಶಕ್ತಿ ಯೋಜನೆ

ಬೆಂಗಳೂರು, ಜು.11- ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ಪೈಕಿ ಮೊದಲು ಜಾರಿಗೆ ಬಂದ ‘ಶಕ್ತಿ’ ಯೋಜನೆ ಒಂದೇ ತಿಂಗಳಿನಲ್ಲಿ ದಾಖಲೆ ಬರೆದಿದ್ದು, ಬರೋಬ್ಬರಿ 32.89 ಕೋಟಿ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ.

ಜೂನ್ 11 ರಿಂದ ಜುಲೈ 10ರ ತನಕ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ 32.89 ಕೋಟಿ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಇವರಲ್ಲಿ 16.73 ಕೋಟಿ ಮಹಿಳೆಯರು. ಶೇ 50.86ರಷ್ಟು ಮಹಿಳಾ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ.

ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಜೂನ್ 11 ರಿಂದ ಜುಲೈ 10ರ ತನಕ ಸಂಚಾರ ನಡೆಸಿದ ಅವಧಿಯಲ್ಲಿನ ಟಿಕೆಟ್ ಮೌಲ್ಯ ಕೆಎಸ್‌ಆರ್‌ಟಿಸಿ 151.25 ಕೋಟಿ. ಬಿಎಂಟಿಸಿ 69.56 ಕೋಟಿ. ಎನ್ ಡಬ್ಲ್ಯೂ ಕೆಆರ್ ಟಿಸಿ103.51 ಕೋಟಿ ಮತ್ತು ಕೆಕೆಆರ್‌ಟಿಸಿ 77.62 ಕೋಟಿ. ಒಟ್ಟಾರೆ ಮೌಲ್ಯ 401.94 ಕೋಟಿಯಾಗಿದೆ ಎಂದರು.

ಇನ್ನೂ, ‘ಶಕ್ತಿ’ ಯೋಜನೆ ಯಶಸ್ವಿಯಾಗಿ ಪ್ರಯಾಣಿಕರ ದಟ್ಟಣೆ ಉಂಟಾದ ಹಿನ್ನಲೆಯಲ್ಲಿ ನಾಲ್ಕು ನಿಗಮಗಳು ಹೆಚ್ಚುವರಿಯಾಗಿ 3147 ಟ್ರಿಪ್‌ಗಳನ್ನು ಓಡಿಸಿವೆ. ಇವುಗಳಲ್ಲಿ ಕೆಎಸ್‌ಆರ್‌ಟಿಸಿ 423, ಬಿಎಂಟಿಸಿ 238, ಎನ್ ಡಬ್ಲ್ಯೂ ಕೆಆರ್ ಟಿಸಿ 986 ಮತ್ತು ಕೆಕೆಆರ್‌ಟಿಸಿ 1,500 ಟ್ರಿಪ್ ಹೆಚ್ಚುವರಿಯಾಗಿ ಓಡಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರತಿದಿನ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುತ್ತಿರುವ ಮಹಿಳಾ ಪ್ರಯಾಣಿಕರ ಅಂಕಿ ಅಂಶ ನೋಡುವುದಾದರೆ, ಕೆಎಸ್‌ಆರ್‌ಟಿಸಿಯಲ್ಲಿ 16.97 ಲಕ್ಷ, ಬಿಎಂಟಿಸಿಯಲ್ಲಿ 17.95 ಲಕ್ಷ, ಎನ್ ಡಬ್ಲ್ಯೂ ಕೆಆರ್ ಟಿಸಿ ಯಲ್ಲಿ 13.42 ಲಕ್ಷ ಮತ್ತು ಕೆಕೆಆರ್‌ಟಿಸಿ 7.43 ಲಕ್ಷ ಸೇರಿ ಒಟ್ಟು 55.77 ಲಕ್ಷ ಪ್ರಯಾಣಿಕರು ಸಂಚಾರ ನಡೆಸುತ್ತಿದ್ದಾರೆ ಎಂದರು.

ಸಾರ್ವಜನಿಕ ಪ್ರಯಾಣಿಕರು, ಅದರಲ್ಲಿಯೂ ಮಹಿಳಾ ಪ್ರಯಾಣಿಕರು ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರತಿದಿನ ಪ್ರಯಾಣಿಸಿ ಸಾರಿಗೆ ಬಸ್ಸುಗಳು ಜನರ ಜೀವನಾಡಿಯೂ ಹೌದು ಹಾಗೂ ಮಹಿಳೆಯರ ಪಯಣದ ಸಾರಥಿಯೂ ಹೌದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಯೋಜನೆಯ ಯಶಸ್ಸಿಗೆ ಮಾಧ್ಯಮ ಮಿತ್ರರ ಪಾತ್ರವೂ ಅನನ್ಯ ಸಮಸ್ತ ಮಾಧ್ಯಮದವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಜೂನ್ 11ರಂದು ‘ಶಕ್ತಿ’ ಯೋಜನೆಗೆ ಚಾಲನೆ ನೀಡಿದ್ದರು. ಯೋಜನೆ ಒಂದು ತಿಂಗಳು ಪೂರೈಸಿದ್ದು, ಹಲವು ಟೀಕೆಗಳ ನಡುವೆಯೂ ಯೋಜನೆ ಯಶಸ್ವಿಯಾಗಿದೆ. ಸಾರಿಗೆ ಸಂಸ್ಥೆಗಳ ಆದಾಯವೂ ಹೆಚ್ಚುತ್ತಿದೆ.ಸಾಮಾನ್ಯ ಸರ್ಕಾರಿ ಬಸ್‌ಗಳಲ್ಲಿ ಶೂನ್ಯ ದರದ ಟಿಕೆಟ್ ಪಡೆದು ಮಹಿಳೆಯರು ಉಚಿತವಾಗಿ ಸಂಚಾರ ನಡೆಸುವ ಯೋಜನೆ ಇದಾಗಿದೆ.