ಒಂದೇ ಕ್ಷೇತ್ರದಿಂದಲೇ ಸ್ಪರ್ಧೆ: ಸಿದ್ದು ಸ್ಪಷ್ಟನೆ

ಹಾಸನ, ಜ.12-ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ವಿಧಾನಸಭೆಯ ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಎರಡು ಕಡೆ ಸ್ಪರ್ಧಿಸಬೇಕೆಂಬ ಮನದೇವರು ನುಡಿದಿರುವ ಕುರಿತು ಹಾಗೂ ಪುತ್ರ ಯತೀಂದ್ರ ಹೇಳಿಕೆ ಕುರಿತು ಹಾಸನದ ಅರಕಲಗೂಡು ತಾಲ್ಲೂಕಿನಲ್ಲಿಂದು ಮೇಲಿನಂತೆ ಪ್ರತಿಕ್ರಿಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಏನೇ ಹೇಳಿದರೂ ತಾವು ಒಂದೇ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಅವರು ತಿಳಿಸಿದರು.
ಅದು ತಮ್ಮ ಪುತ್ರ ಯತೀಂದ್ರನ ಅಭಿಪ್ರಾಯ. ಪಾಪ ಅವರು ತಂದೆಯ ಮೇಲಿನ ಪ್ರೀತಿಯಿಂದ ಹೇಳಿಕೆ ನೀಡಿದ್ದಾರೆ. ಆದರೆ ಒಂದು ಕ್ಷೇತ್ರದಿಂದ ಸ್ಪರ್ಧಿಸುವುದು ತಮ್ಮ ಅಭಿಪ್ರಾಯವಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಹೇಳಿಕೆ ಉತ್ತರಿಸಿದ ಅವರು, ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷದವರಾ? ತಮ್ಮನ್ನು ಯಾರೂ ಹರಕೆಯ ಕುರಿ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ. ಹಾಗಾಗಿ ವಿರೋಧ ಪಕ್ಷದವರು ನೀಡಿರುವ ಹೇಳಿಕೆಗೆ ಉತ್ತರ ಕೊಡಲು ಆಗುವುದಿಲ್ಲ ಎಂದು ತಿಳಿಸಿದರು.