ಒಂದೇ ಕುಟುಂಬದ ಮೂವರು ಮಹಿಳೆಯರು ಆತ್ಮಹತ್ಯೆ

ಚಿತ್ರದುರ್ಗ, ನ.೪: ಒಂದೇ ಕುಟುಂಬದ ಮೂವರು ಮಹಿಳೆಯರು ವಿಷ ಕುಡಿದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತರನ್ನು ಗೋಪನಹಳ್ಳಿ ಗ್ರಾಮದ ದಲಿತ ಕಾಲೋನಿಯ ಮಂಗೇರ ತಿಪ್ಪಜ್ಜಿ (೭೦), ಮಾರಕ್ಕ (೪೫) ಮತ್ತು ದ್ಯಾಮಕ್ಕ(೪೩) ಎಂದು ಗುರುತಿಸಲಾಗಿದೆ.
ಗುರುವಾರ ಬೆಳಗಿನ ಜಾವ ಈ ಘಟನೆ ನಡೆದಿದ್ದು, ಬೆಳಗ್ಗೆ ಆದರೂ ಕೂಡ ಬಾಗಿಲು ತೆರೆಯದೆ ಇದ್ದಾಗ ಅಕ್ಕ ಪಕ್ಕದವರು ಕದ ತಟ್ಟಿದ್ದಾರೆ. ಕಿಟಕಿಯಿಂದ ನೀರು ಎರಚಿದರೂ ಸಹ ಎಚ್ಚರಗೊಳ್ಳದ ಕಾರಣ ರಾತ್ರಿ ವೇಳೆಗೆ ಚಳ್ಳಕೆರೆ ಪೋಲಿಸ್ ಠಾಣೆಗೆ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿದ ಚಳ್ಳಕೆರೆ ಪೋಲಿಸರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಬಾಗಿಲು ಹೊಡೆದು ಒಳಗಡೆ ನೋಡಿದಾಗ ಮೂವರು ನೀರಿನಲ್ಲಿ ವಿಷ ಬೆರೆಸಿ ಕುಡಿದಿರುವುದು ತಿಳಿದು ಬಂದಿದೆ.
ತಿಪ್ಪಜ್ಜಿಯ ಇಬ್ಬರು ಪುತ್ರಿಯರು ಮಾನಸಿಕ ಖಿನ್ನತೆಗೆ ಒಳಗಾಗಿ ಗಂಡನ ಮನೆ ಬಿಟ್ಟು ತವರು ಮನೆಯಲ್ಲಿ ವಾಸವಾಗಿದ್ದರು ಎಂದು ಹೇಳಲಾಗುತ್ತಿದ್ದು, ಈ ಇಬ್ಬರು ಮಕ್ಕಳನ್ನು ತಿಪ್ಪಜ್ಜಿಯೇ ನೋಡಿಕೊಳ್ಳುತ್ತಿದ್ದರು. ಒಂದು ವರ್ಷದ ಹಿಂದೆ ತಿಪ್ಪಜ್ಜಿಯ ಗಂಡ ಕೆಂಚಪ್ಪ ಮೃತಪಟ್ಟಿದ್ದರು. ಅಲ್ಲದೆ ತಿಂಗಳ ಹಿಂದೆ ಮಗ ದ್ಯಾಮಣ್ಣ ಕೂಡ ಅನಾರೋಗ್ಯದಿಂದ ಮೃತಪಟ್ಟಿದ್ದರು. ಗಂಡ ಮತ್ತು ಮಗನ ಸಾವಿನ ನಂತರ ಇಬ್ಬರೂ ಹೆಣ್ಣು ಮಕ್ಕಳ ನಿರ್ವಹಣೆ ಕಷ್ಟವಾಗಿ ಇದರಿಂದಲೇ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಸಾಮೂಹಿಕವಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಮೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆ.