
ಬೀದರ್,ಮೇ.೧-ಜಿಲ್ಲೆಯಾದ್ಯಂತ ವ್ಯಾಪಕವಾಗಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಹರಿಯುತ್ತಿರುವ ಹಳ್ಳ ದಾಟಲು ಹೋಗಿ ಒಂದೇ ಕುಟುಂಬದ ಮೂವರು ಕೊಚ್ಚಿ ಹೋದ ದಾರುಣ ಘಟನೆ ಔರಾದ್ ತಾಲ್ಲೂಕಿನ ಹೆಡಗಾಪೂರ್ ಗ್ರಾಮದಲ್ಲಿ ನಿನ್ನೆ ನಡೆದಿದೆ.
ತಾಲೂಕಿನ ಹೆಡಗಾಪೂರ ಹಾಗೂ ಚಂದ್ರಾ ಮಹಾರಾಜ ತಾಂಡಾ ನಡುವೆ ಬರುವ ಕಾಲುವೆಯಲ್ಲಿ ಈ ಘಟನೆ ನಡೆದಿದೆ, ನಾಲ್ಕು ಜನ ಹೊಲದಿಂದ ಮನೆ ಹಿಂತಿರುಗಿ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಹೆಡಗಾಪೂರ ಗ್ರಾಮದ ಸಂಗಪ್ಪ ಗಣಪತಿ ಲದ್ದೆ ಅವರು ಹೊಲದಲ್ಲಿ ಕೃಷಿ ಕೆಲಸಕ್ಕೆ ಹೋಗಿದ್ದು ಕೆಲಸ ಮುಗಿಸಿಕೊಂಡು ಮರಳಿ ಹಿಂತಿರುವಾಗ ಪತ್ನಿ ಸುನಂದಾ (೪೮), ಪುತ್ರಿ ಐಶ್ವರ್ಯ (೧೬) ಹಾಗೂ ಪುತ್ರ ಸುಮೀತ್ (೧೦) ಜೊತೆ ಮನೆಗೆ ವಾಪಸ್ಸಾಗುವ ಮಾರ್ಗ ಮಧ್ಯದಲ್ಲಿ ಮಳೆ ನೀರಿನಿ೦ದ ತುಂಬಿ ಹರಿಯುತ್ತಿದ ಹಳ್ಳ ದಾಟುತ್ತಿದ್ದಾಗ ಮಳೆ ನೀರಿನ ಪ್ರವಾಹವು ಹಠಾತ್ತಾಗಿ ಹೆಚ್ಚಾಗಿ ಅದರಲ್ಲಿ ಸಿಲುಕಿದ್ದು, ಸಂಗಪ್ಪ ದಡ ಸೇರಿದರೆ ಪತ್ನಿ, ಪುತ್ರಿ ಹಾಗೂ ಪುತ್ರ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ನೀರಿನಲ್ಲಿ ಕೊಚ್ಚಿಹೋದ ತಾಯಿ ಮತ್ತು ಮಕ್ಕಳ ಪತ್ತೆಗಾಗಿ ಡಿಎಸ್‌ಪಿ ಪೃಥ್ವಿಶಂಕರ, ಕಮಲನಗರ ಸಿಪಿಐ ಪಂಡಿತಸಾಗರ, ಸಂತಪೂರ ಪೋಲಿಸ, ಠಾಣಾಕುಶನೂರ ಪಿಎಸ್‌ಐ ಆಶಾ ರಾಠೋಡ, ತಹಸೀಲ್ದಾರ್ ಮಲ್ಲಿಕಾರ್ಜುನ್ ವಡನಕೇರಿ ಹಾಗೂ ಅಗ್ನಿಶಾಮಕ ದಳದ ರಾಮಪ್ಪ ಅವರು ಇಡೀ ರಾತ್ರಿ ಶೋಧ ಕಾರ್ಯ ನಡೆಸಿ ಇಂದು ಬೆಳಿಗ್ಗೆ ಮೂವರ ಮೃತದೇಹಗಳು ಪತ್ತೆಯಾಗಿದ್ದು, ಮೃತರ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ