ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು!

ಶಿವಮೊಗ್ಗ, ಜ.14: ಸಾಲಬಾಧೆ ಹಾಗೂ ಜೀವನ ನಿರ್ವಹಣೆ ಮಾಡಲಾಗದೆ  ಬೇಸತ್ತ ಕಡುಬಡ ಕುಟುಂಬವೊಂದರ ಮೂವರು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಶಿವಮೊಗ್ಗ ನಗರದ ಮಿಳಘಟ್ಟ ಬಡಾವಣೆ 1 ನೇ ತಿರುವಿನಲ್ಲಿ ನಡೆದಿದೆ. ಪರಂದಯ್ಯ (70), ದಾನಮ್ಮ (60) ಮತ್ತು ಅವರ ಸಾಕು ಮಗ ಮಂಜುನಾಥ್ (25) ಆತ್ಮಹತ್ಯೆ ಮಾಡಿಕೊಂಡವರೆಂದು ಗುರುತಿಸಲಾಗಿದೆ. ದಂಪತಿಗಳಿಗೆ ಮಕ್ಕಳಿರದ ಕಾರಣದಿಂದವ ಕಳೆದ 20 ವರ್ಷಗಳ ಹಿಂದೆ ಮಂಜುನಾಥ್ ರವರನ್ನು ಸಾಕಿಕೊಂಡಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.ಜ.11 ರ ರಾತ್ರಿ ಮೂವರು ತಾವು ವಾಸವಾಗಿದ್ದ ಬಾಡಿಗೆ ಮನೆಯಲ್ಲಿಯೇ ವಿಷ ಸೇವಿಸಿದ್ದಾರೆ. ಜ.12 ರ ಮಧ್ಯಾಹ್ನ ನೆರೆಹೊರೆಯವರಿಗೆ ಘಟನೆ ಗೊತ್ತಾಗಿದೆ. ಪರಿಶೀಲನೆ ವೇಳೆ ದಂಪತಿ ಮೃತಪಟ್ಟಿದ್ದು ಕಂಡುಬಂದಿದೆ. ಗಂಭೀರ ಸ್ಥಿತಿಯಲ್ಲಿದ್ದ ಮಂಜುನಾಥ್ ಅವರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಡತನ : ಸದರಿ ಕುಟುಂಬವು ಕಡು ಬಡತನದಲ್ಲಿ ಜೀವನ ನಡೆಸುತ್ತಿತ್ತು. ಅವರ ಬಳಿ ಪಡಿತರ ಚೀಟಿಯು ಇರಲಿಲ್ಲ. ಸರ್ಕಾರದ ಯಾವೊಂದು ಸೌಲಭ್ಯವು ಕುಟುಂಬಕ್ಕೆ ದೊರಕಿರಲಿಲ್ಲ ಎದ್ದು ಸ್ಥಳೀಯರು ಹೇಳುತ್ತಾರೆ.