ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ

ಗದಗ,ಏ.,೧೯-ಮನೆಯಲ್ಲಿ ಮಲಗಿದ್ದ ಒಂದೇ ಕುಟುಂಬದ ನಾಲ್ವರನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಭಯಾನಕ ಘಟನೆ ನಗರದ ದಾಸರ ಓಣಿಯಲ್ಲಿ ಇಂದು ನಸುಕಿನಲ್ಲಿ ನಡೆದಿದ್ದು, ಜಿಲ್ಲೆಯ ಜನತೆ ಬೆಚ್ಚಿಬಿದ್ದಿದೆ.
ಈ ಬರ್ಬರ ಹತ್ಯೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ್ ಬಾಕಳೆ (೨೭), ಪರಶುರಾಮ (೫೫), ಪತ್ನಿ ಲಕ್ಷ್ಮೀ (೪೫), ಪುತ್ರಿ ಆಕಾಂಕ್ಷಾ (೧೬) ಕೊಲೆಯಾದವರು.
ಕೃತ್ಯ ನಡೆಸಿ ಪರಾರಿಯಾಗಿರುವ ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಶೋಧ ನಡೆಸಿದ್ದಾರೆ.
ಮೊದಲನೇ ಮಹಡಿಯ ಕೋಣೆಯಲ್ಲಿ ಮಲಗಿದ್ದ ಪತಿ, ಪತ್ನಿ, ಮಗಳನ್ನು ಕೊಲೆ ಮಾಡಲಾಗಿದೆ. ಈ ಮೂವರೂ ಕೊಪ್ಪಳ ಮೂಲದವರಾಗಿದ್ದು, ಏಪ್ರಿಲ್ ೧೭ರಂದು ನಡೆದ ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ್‌ನ ಮದುವೆ ನಿಶ್ಚಯ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ಸಂಬಂಧಿಗಳಾಗಿದ್ದಾರೆ.
ಮೇಲಿನ ಮಹಡಿಯ ಬಾಗಿಲು ಸದ್ದು ಕೇಳಿ ಅನುಮಾನಗೊಂಡು ಕುಟುಂಬಸ್ಥರು ಪೊಲೀಸರಿಗೆ ಫೋನ್ ಮಾಡಿದ್ದರು. ಪೊಲೀಸರಿಗೆ ಫೋನ್ ಮಾಡುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬಾಗಿಲು ತೆಗೆದಿದ್ದರೆ ನಮ್ಮನ್ನೂ ಕೊಲೆ ಮಾಡುವ ಸಾಧ್ಯತೆಯಿತ್ತು ಎಂದು ಮನೆ ಮಾಲೀಕ ಪ್ರಕಾಶ್ ಬಾಕಳೆ ಹೇಳಿಕೆ ನೀಡಿದ್ದಾರೆ.
ಕೊಲೆಗೆ ಕಾರಣ ಸದ್ಯಕ್ಕೆ ತಿಳಿದು ಬಂದಿಲ್ಲ. ಕೃತ್ಯ ಎಸಗಿದ ಹಂತಕರನ್ನು ಆದಷ್ಟು ಬೇಗ ಬಂಧನಕ್ಕೆ ಬಲೆ ಬೀಸಲಾಗಿದೆ. ಬೆಳಗಿನ ಜಾವ ೨ ರಿಂದ ೩ ಗಂಟೆ ಒಳಗೆ ಈ ಘಟನೆ ನಡೆದಿರಬಹುದು ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳು ಹೇಗೆ ಬಂದರು ಎಂಬುದರ ಬಗ್ಗೆ ಕುಟುಂಬಸ್ಥರು ನೀಡಿದ ಮಾಹಿತಿ ಮೇರೆಗೆ ತನಿಖೆ ನಡೆಸಲಾಗುವುದು. ಸದ್ಯಕ್ಕೆ ದುಷ್ಕರ್ಮಿಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸಿಟಿಟಿವಿ ಸೇರಿದಂತೆ ಇತರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ತಿಳಿಸಿದ್ದಾರೆ.
ಶ್ವಾನದಳ, ಫಾರೆನ್ಸಿಕ್ ತಂಡಗಳು ಆಗಮಿಸಿದ್ದು, ಮನೆಯ ಇಂಚಿಂಚೂ ಪರಿಶೀಲನೆ ಮಾಡಲಾಗಿದೆ. ಮೇಲ್ನೋಟಕ್ಕೆ ದರೋಡೆಗೆ ಬಂದ ತಂಡ ನಡೆಸಿರುವ ಕೃತ್ಯದಂತೆ ಕಂಡುಬಂದಿದ್ದರೂ, ಪ್ರಕರಣದ ಹಲವು ಮಗ್ಗಲುಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.