ಒಂದೇ ಕಾಮಗಾರಿ 2 ಬಾರಿ ಹಣ ಬಿಡುಗಡೆ !

ಬೆಂಗಳೂರು, ನ.೧೦- ಒಂದೇ ಕಾಮಗಾರಿಗೆ ಎರಡು ಬಾರಿ ಹಣ ಬಿಡುಗಡೆ ಸಂಬಂಧ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಮತ್ತೊಂದು ಹಗರಣ ಬಯಲಿಗೆ ಎಳೆದಿರುವ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು, ದಾಖಲೆಗಳ ಸಮೇತ ಭ್ರಷ್ಟಾಚಾರ ನಿಗ್ರಹ ದಳ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಗೆ ದೂರು ನೀಡಿದ್ದಾರೆ.
ನಗರದಲ್ಲಿಂದು ಬಿಬಿಎಂಪಿ ಕಚೇರಿಯಲ್ಲಿ ದೂರು ಸಲ್ಲಿಸಿದ ಅವರು, ಒಂದೇ ಕಾಮಗಾರಿಗೆ ಎರಡು ಬಾರಿ ಹಣ ಬಿಡುಗಡೆ ಮಾಡಿಸಿಕೊಂಡ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಗಾಂಧಿನಗರ ವಿಭಾಗದ ಕಾರ್ಯಪಾಲಕ ಅಭಿಯಂತರರು ವಾರ್ಡ್ ನಂ.೧೨೧ರ ಗೋಪಾಲಪುರ ಸುತ್ತಮುತ್ತ ಡಾಂಬರು ಹಾಕುವ ಕಾಮಗಾರಿಯನ್ನು ಕೆಆರ್ ಐಡಿಎಲ್ ಮೂಲಕ ನಿರ್ವಹಿಸಲು ಕಾರ್ಯಾದೇಶ ಪತ್ರ ನೀಡಿದ್ದರು.
ಅಲ್ಲದೆ, ಕಾಮಗಾರಿ ಪೂರ್ಣಗೊಂಡಿದೆ ಎಂದು ಛಾಯಾಚಿತ್ರಗಳ ಸಹಿತ ದಾಖಲೆ ಒದಗಿಸಿ ಒಂದು ಕೋಟಿಗೂ ಹೆಚ್ಚು ಹಣವನ್ನು ಕೆಆರ್ ಐಡಿಎಲ್‌ಗೆ ೨೦೧೯ರಲ್ಲೇ ಬಿಡುಗಡೆ ಮಾಡಲಾಗಿದೆ.
ಆದರೆ, ೨೦೧೯ರಲ್ಲಿ ಪೂರ್ಣಗೊಂಡಿರುವ ಕಾಮಗಾರಿಗೆ ೨೦೨೦ರಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಮತ್ತೊಮ್ಮೆ ಒಂದು ಕೋಟಿ ರೂ.ಗಳಷ್ಟು ಹಣ ಬಿಡುಗಡೆ ಮಾಡಿಕೊಳ್ಳುವ ಮೂಲಕ ಭಾರಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ರಮೇಶ್ ಆರೋಪಿಸಿದರು.
ಒಂದೇ ಕಾಮಗಾರಿಗೆ ಎರಡು ಬಾರಿ ಬಿಲ್ ಮಾಡಿಸಿಕೊಂಡು ಬಿಬಿಎಂಪಿ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಭ್ರಷ್ಟ ಅಕಾರಿಗಳಿಗೆ ಪ್ರಭಾವಿ ವ್ಯಕ್ತಿಗಳ ಕೃಪಾ ಕಟಾಕ್ಷವಿದೆ. ಹೀಗಾಗಿ ಭ್ರಷ್ಟಾಚಾರ ನಡೆಸಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಮೇಶ್ ಮನವಿ ಮಾಡಿಕೊಂಡಿದ್ದಾರೆ.