ಒಂದೇ ಆಂಬುಲೆನ್ಸ್‌ನಲ್ಲಿ 22 ಶವ ಸಾಗಾಟ

ಔರಂಗಾಬಾದ್,ಏ.೨೭- ಮಹಾರಾಷ್ಡ್ರದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ದೇಹಗಳನ್ನು ಸಾಗಿಸಲು ಆಂಬುಲೆನ್ಸ್ ವಾಹನಗಳಿಲ್ಲದೆ ಪರಿತಪಿಸುವಂತಾಗಿದ್ದು, ಒಂದೇ ಆಂಬುಲೆನ್ಸ್‌ನಲ್ಲಿ ೨೨ ಮಂದಿಯ ಮೃತದೇಹವನ್ನು ಚಿತಾಗಾರಕ್ಕೆ ರವಾನಿಸಿದ ದಯನೀಯ ಪರಿಸ್ಥಿತಿ ಎದುರಾಗಿರುವುದು ಕೋವಿಡ್ ಭೀಕರತೆಗೆ ಹಿಡಿದ ಕೈಗನ್ನಡಿಯಾಗಿದೆ.
ಮಹಾರಾಷ್ಟ್ರದಲ್ಲಿ ಜನತಾ ಕರ್ಫ್ಯೂ ಹೇರಿದ್ದರಿಂದ ಸ್ವಲ್ಪಮಟ್ಟಿಗೆ ಸೋಂಕಿನ ಪರಿಸ್ಥಿತಿ ಹತೋಟಿಗೆ ತಲುಪಿದೆ.ಆದರೆ, ಭಾನುವಾರ ೨೨ ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದರು.
ಈ ಶವಗಳನ್ನು ಸಾಗಿಸಲು ಆಂಬ್ಯುಲೆನ್ಸ್ ಕೊರತೆ ಎದುರಾದ ಕಾರಣ ಒಂದೇ ಆಂಬುಲೆನ್ಸ್‌ನಲ್ಲಿ ರವಾನಿಸಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಒಳಗಾಗಿದೆ.
ಬೀಡ್ ನಗರದ ಅಂಭಾಜೋಗಾಯಿನಲ್ಲಿರುವ ಸ್ವಾಮಿ ರಮಾನಂದತೀರ್ಥ ಗ್ರಾಮೀಣ ಸರ್ಕಾರಿ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿರಿಸಲಾಗಿದ್ದ ಕೊರೊನಾ ಸೋಂಕಿನಿಂದ ಮೃತಪಟ್ಟ ದೇಹಗಳನ್ನು ಅಂತ್ಯಕ್ರಿಯೆಗಾಗಿ ಚಿತಾಗಾರಕ್ಕೆ ಸಾಗಿಸುವಾಗ ಈ ಮನಕಲಕುವ ಘಟನೆ ನಡೆದಿದೆ.
ಆಸ್ಪತ್ರೆಯಲ್ಲಿ ಶವ ಸಾಗಿಸಲು ಅಗತ್ಯವಿರುವಷ್ಟು ಆಂಬುಲನ್ಸ್‌ಗಳೇ ಇಲ್ಲ.ಕಳೆದ ವರ್ಷ ಮೊದಲ ಅಲೆ ಕಾಣಿಸಿಕೊಂಡಾಗ ೫ ಅಂಬುಲೆನ್ಸ್‌ಗಳು ಇದ್ದವು. ಆನಂತರ ಮೂರು ಆಂಬುಲೆನ್ಸ್‌ಗಳನ್ನು ವಾಪಾಸ್ ಕರೆಸಿಕೊಳ್ಳಲಾಗಿದೆ. ಈಗ ಎರಡೇ ಆಂಬುಲೆನ್ಸ್‌ಗಳಲ್ಲಿ ಕೋವಿಡ್ ರೋಗಿಗಳನ್ನು ಕರೆ ತರುವ ನಿರ್ವಹಣೆ ಮಾಡಲಾಗುತ್ತಿದೆ ಎಂದು ಗ್ರಾಮೀಣ ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್ ಡಾ. ಶಿವಾಜಿಸೊರಕೆ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಲೋಕಂಡಿ ಸಾವರ್‌ಗಾಂವ್ ಗ್ರಾಮದಲ್ಲಿರುವ ಕೋವಿಡ್ ಕೇಂದ್ರಗಳಲ್ಲಿ ಶವಗಳನ್ನಿಡಲು ಶೀತಲ ಗೃಹಗಳೂ ಇಲ್ಲ. ಇದರಿಂದಾಗಿ ಶವಗಳನ್ನು ಈ ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ. ಈಗ ಸದ್ಯದ ಪರಿಸ್ಥಿತಿ ಬಿಗಡಾಯಿಸಿದ್ದು, ಇನ್ನೂ ೩ ಆಂಬುಲೆನ್ಸ್‌ಗಳನ್ನು ಒದಗಿಸುವಂತೆ ಮಾ. ೧೭ ರಂದೇ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಪರಿಣಾಮ ಒಂದೇ ಆಂಬುಲೆನ್ಸ್‌ನಲ್ಲಿ ೨೦ ಶವಗಳನ್ನು ಸಾಗಿಸುವ ಅತ್ಯಂತ ಘೋರ ಪರಿಸ್ಥಿತಿಗೆ ಕಾರಣವಾಗಿದೆ.
ಶವ ಸಾಗಾಟದ ಆಂಬುಲೆನ್ಸ್ ಕೊರತೆ ನೀಗಿಸುವುದಕ್ಕಾಗಿ ಬೆಳಿಗ್ಗೆ ೮ ರಿಂದ ರಾತ್ರಿ ೧೦ರವರೆಗೆ ಶವ ಸಂಸ್ಕಾರ ನಡೆಸಲು
ಮುನ್ಸಿಪಲ್‌ಗೆ ಅಂಭಾಜೋಗಾಯಿ ಮುನ್ಸಿಪಲ್ ಕೌನ್ಸಿಲ್‌ಗೆ ಪತ್ರ ಬರೆಯಲಾಗಿದ್ದು, ಆಸ್ಪತ್ರೆಯ ವಾರ್ಡಿನಿಂದ ಶವಗಳನ್ನು ಚಿತಾಗಾರಕ್ಕೆ ಕಳುಹಿಸಲಾಗುವುದು ಎಂದು ಸೊರಕೆ ತಿಳಿಸಿದ್ದಾರೆ.