
ಕಲಬುರಗಿ :ಎ.27: ದೇಶದಲ್ಲಿ ಆಯಾ ರಾಜ್ಯಗಳಲ್ಲಿ ಮತ್ತು ಆಯಾ ರೈಲ್ವೆ ವಲಯಗಳಲ್ಲಿ ಒಂದೇ ಭಾರತ ರೈಲುಗಳ ಆರಂಭಿಸಿರುವುದು ಸಂತೋಷದ ವಿಷಯವಾಗಿದೆ. ಆದರೆ, ಮುಂಬೈಯಿಂದ ಸೋಲಾಪೂರ ವರೆಗೆ ಆರಂಭಿಸಿರುವ ಒಂದೇ ಭಾರತ ರೈಲು ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಕಲಬುರಗಿಯ ವರೆಗೆ ವಿಸ್ತರಿಸದೇ ಉದ್ದೇಶಪೂರ್ವಕವಾಗಿಯೇ ಕಲ್ಯಾಣ ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡಲಾಗಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಬಲವಾಗಿ ಖಂಡಿಸಿದ್ದಾರೆ.
ಮುಂಬೈ ರೈಲ್ವೆ ವಲಯ ಆರಂಭವಾದಾಗಿನಿಂದಲೂ ರೈಲ್ವೆ ವಿಭಾಗಗಳ ರಚನೆಯಲ್ಲಿ, ರೈಲ್ವೆ ಕಾಮಗಾರಿಗಳ ಕ್ಷೇತ್ರದಲ್ಲಿ ಮತ್ತು ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಅಸ್ತಿತ್ವಕ್ಕೆ ತರುವಲ್ಲಿ ನಿರಂತರವಾಗಿ ಮಲತಾಯಿ ಧೋರಣೆ ಮುಂಬೈ ವಲಯದ ಮರಾಠಿಗರಿಂದ ನಡೆಯುತ್ತಾ ಬರುತ್ತಿದೆ. ಅದೇ ರೀತಿಯಾಗಿ ಈಗ ಒಂದೇ ಭಾರತ ರೈಲು ಮುಂಬೈ ವಲಯದ ವಾಡಿಯ ವರೆಗೆ ವ್ಯಾಪ್ತಿ ಇದ್ದರೂ ಸಹ ಈ ರೈಲು ಸೋಲಾಪೂರವರೆಗೆ ಸೀಮಿತಗೊಳಿಸಿ ಕರ್ನಾಟಕಕ್ಕೆ ಅದರಲ್ಲೂ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮುಂಬೈ ರೈಲ್ವೆ ವಲಯ ಮಲತಾಯಿ ಧೋರಣೆ ಮಾಡಿರುವುದು ಖಂಡನೀಯವಾಗಿದೆ. ಮುಂಬೈ ರೈಲ್ವೆ ವಲಯದಲ್ಲಿ ಸೊಲಾಪೂರ ರೈಲ್ವೆ ವಿಭಾಗೀಯ ಕಚೇರಿಯಿಂದ ಶೇ.85% ರಷ್ಟು ಆದಾಯ ವಾಡಿ, ಕಲಬುರಗಿ ವ್ಯಾಪ್ತಿಯಿಂದ ಮುಂಬೈ ವಲಯಕ್ಕೆ ಸೇರುತ್ತದೆ. ಆದಾಯ ಪಡೆಯಲು ಮಾತ್ರ ಕರ್ನಾಟಕದ ಕಲಬುರಗಿ ಬೇಕು. ಆದರೆ ರೈಲ್ವೆ ಕ್ಷೇತ್ರದ ಅಭಿವೃದ್ಧಿಯ ಪ್ರಶ್ನೆ ಬಂದಾಗ ಮುಂಬೈ ರೈಲ್ವೆ ವಲಯ ಮತ್ತು ಸೊಲಾಪೂರ ವಿಭಾಗಿಯ ಕಚೇರಿಯ ಅಧಿಕಾರಿಗಳು ನಿರಂತರ ಮಲತಾಯಿ ಧೋರಣೆ ಮತ್ತು ನಿರ್ಲಕ್ಷತನ ಮಾಡುತ್ತಾರೆ.
ಕೇಂದ್ರ ಸರಕಾರ ಮತ್ತು ರೈಲ್ವೆ ಮಂತ್ರಾಲಯ, ಈ ವಿಷಯದ ಬಗ್ಗೆ ಗಂಭೀರವಾಗಿ ಪರಿಗಣಿಸಿ ತಕ್ಷಣ ಸ್ಪಂದಿಸಬೇಕು. ಅದರಂತೆ ಕೇಂದ್ರದ ಸಚಿವರಾದ ಭಗವಂತ ಖೂಬಾ ಮತ್ತು ಕಲಬುರಗಿ ಲೋಕಸಭಾ ಸದಸ್ಯರಾದ ಉಮೇಶ ಜಾಧವ ಅವರು ಈ ಬಗ್ಗೆ ವಿಶೇಶ ಮುತುವರ್ಜಿ ವಹಿಸಿ ಒಂದೇ ಭಾರತ ರೈಲು ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ, ಕಲಬುರಗಿಯವರೆಗೆ ವಿಸ್ತರಿಸಲು ವಿಶೇಷ ಕಾಳಜಿ ವಹಿಸಲು ಸಮಿತಿ ಒತ್ತಾಯಿಸುತ್ತದೆ. ಅದೇ ರೀತಿಯಾಗಿ ಮುಂಬೈ ರೈಲ್ವೆ ವಲಯ ಮತ್ತು ಸೊಲಾಪುರ ರೈಲ್ವೆ ವಿಭಾಗೀಯ ಅಧಿಕಾರಿಗಳು ಕಲಬುರಗಿ ರೈಲ್ವೆ ಕ್ಷೇತ್ರದ ಅಭಿವೃದ್ಧಿಗೆ ಮಾಡುತ್ತಿರುವ ಮಲತಾಯಿ ಧೋರಣೆ ಇದೇ ರೀತಿಯಾಗಿ ಮುಂದುವರೆದರೆ, ಬರುವ ದಿನಗಳಲ್ಲಿ ಕಲಬುರಗಿ ರೈಲ್ವೆ ನಿಲ್ದಾಣದ ಎದುರು ಉಗ್ರ ಪ್ರತಿಭಟನೆ ಮಾಡಲಾಗುವದೆಂದು ಸಮಿತಿ ಎಚ್ಚರಿಸಿದೆ.