ಒಂದೆರೆಡು ದಿನದಲ್ಲಿ ಕೈ ಪಟ್ಟಿ ಬಿಡುಗಡೆ

ಬೆಂಗಳೂರು,ಮಾ.೨೩:ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ಬಿಡುಗಡೆಯಾಗುವ ಸಾಧ್ಯತೆ ಕಡಿಮೆ ಇದ್ದು, ನಾಳೆ ಇಲ್ಲವೇ ನಾಡಿದ್ದು ಪಟ್ಟಿ ಬಿಡುಗಡೆಯಾಗಲಿದೆ.
ಯುಗಾದಿ ಹಬ್ಬದ ದಿನದಂದು ಪಟ್ಟಿ ಬಿಡುಗಡೆಗೆ ಮುಹೂರ್ತ ನಿಗದಿಯಾಗಿತ್ತು. ಆದರೆ, ಕಾಂಗ್ರೆಸ್ ನಾಯಕರು ಯುಗಾದಿ ಹಬ್ಬದ ಮರುದಿನ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದರಾದರೂ ಇಂದು ಪಟ್ಟಿ ಬಿಡುಗಡೆಯಾಗಲ್ಲ. ನಾಳೆ ಅಥವಾ ನಾಡಿದ್ದು ಆಗಲಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಯುಗಾದಿ ಹಬ್ಬದ ಮರುದಿನ ಪಟ್ಟಿ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಟಿಕೆಟ್ ಆಕಾಂಕ್ಷಿಗಳಿಗೆ ಮತ್ತೆ ನಿರಾಶೆಯಾಗಿದ್ದು, ಪಟ್ಟಿ ಬಿಡುಗಡೆ ಮತ್ತೆ ವಿಳಂಬವಾಗಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಯುಗಾದಿ ಹಬ್ಬದ ದಿನವಾದ ನಿನ್ನೆ ರಾಜ್ಯ ನಾಯಕರೊಂದಿಗೆ ಮಹತ್ವದ ಚರ್ಚೆ ನಡೆಸಿ ಪಟ್ಟಿಯೊಂದಿಗೆ ಇಂದು ದೆಹಲಿಗೆ ತೆರಲಿದ್ದು, ವರಿಷ್ಠರೊಂದಿಗೆ ಚರ್ಚಿಸಿ ದೆಹಲಿಯಲ್ಲೇ ನಾಳೆ ಇಲ್ಲವೇ ನಾಡಿದ್ದು ಪಟ್ಟಿ ಬಿಡುಗಡೆ ಮಾಡುವರು ಎಂದು ಹೇಳಲಾಗಿದೆ.
ಮೊದಲ ಪಟ್ಟಿಯಲ್ಲಿ ಬಹುತೇಕ ಎಲ್ಲ ಹಾಲಿ ಶಾಸಕರಿಗೂ ಟಿಕೆಟ್ ನೀಡುವುದು ನಿಶ್ಚಿತವಾಗಿದ್ದು, ಉಳಿದಂತೆ ಪೈಪೋಟಿ ಇಲ್ಲದ ಕಡೆ ಅಭ್ಯರ್ಥಿಗಳ ಘೋಷಣೆಯಾಗಲಿದ್ದು, ಮೊದಲ ಪಟ್ಟಿಯಲ್ಲಿ ೧೨೬ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಲಿದೆ.

ಸಿದ್ದರಾಮಯ್ಯರವರ ಕ್ಷೇತ್ರವೂ ಅಂತಿಮ
ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದು ಬಗೆಹರಿಯದ ಕಾರಣದಿಂದ ಪಟ್ಟಿ ಬಿಡುಗಡೆಯೂ ವಿಳಂಬವಾಗಲಿದೆ ಎನ್ನಲಾಗಿದ್ದು, ಮೊದಲ ಪಟ್ಟಿಯಲ್ಲಿ ಸಿದ್ದರಾಮಯ್ಯರವರ ಹೆಸರು ಇರಲಿದ್ದು, ಸಿದ್ದರಾಮಯ್ಯರವರಿಗೆ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚಿಸಿದ್ದು, ಸಿದ್ದರಾಮಯ್ಯರವರು ಇದಕ್ಕೆ ಒಂದೆರೆಡು ದಿನ ಸಮಯ ಕೇಳಿದ್ದರು. ಹಾಗಾಗಿ, ಸಿದ್ದರಾಮಯ್ಯರವರ ಹೆಸರು ಸೇರಿಸಿಯೇ ಪಟ್ಟಿ ಪ್ರಕಟಿಸಲು ಹೈಕಮಾಂಡ್ ತೀರ್ಮಾನಿಸಿರುವ ಕಾರಣ ಪಟ್ಟಿ ಬಹುತೇಕ ನಾಳೆ ಪ್ರಕಟವಾಗಲಿದೆ.