ಒಂದೆರಡು ದಿನದಲ್ಲಿ ಜೆಡಿಎಸ್ 2 ನೇ ಪಟ್ಡಿ ಬಿಡುಗಡೆ:ಎಚ್ ಡಿಕೆ

ಬೆಂಗಳೂರು, ಏ.4-ಎರಡು ದಿನದಲ್ಲಿ ಜೆಡಿಎಸ್ 2ನೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರು ತಿಳಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರಿಗೆ‌ ಮಾಹಿತಿ ನೀಡಿದ ಅವರು, ಇಂದು ಮಂಗಳವಾರ ಆಗಿರುವುದರಿಂದ ಪಟ್ಟಿ ಬಿಡುಗಡೆ ಆಗಿಲ್ಲ. ದೇವೇಗೌಡರು ನಾಳೆ ಸಂಜೆ ದೆಹಲಿಯಿಂದ ವಾಪಸ್ ಆಗುತ್ತಾರೆ. ನಂತರ ಪಟ್ಟಿ ಬಿಡುಗಡೆಯಾಗಲಿದೆ ಎಂದರು.

ಕುತೂಹಲ ಕೆರಳಿಸಿರುವ ಹಾಸನ ವಿಧಾನಸಭಾ ಕ್ಷೇತ್ರ ಪಟ್ಟಿ ಬಿಡುಗಡೆ ಮಾಡುತ್ತೇವೆ. ಅದನ್ನು ಬಿಟ್ಟು ಮಾಡಿದರೆ ಇನ್ನೊಂದು ಕಥೆ ಹುಟ್ಟಿಕೊಳ್ಳುತ್ತದೆ. ಆದ್ದರಿಂದ ಆ ಪಟ್ಟಿಯಲ್ಲಿ ಹಾಸನದ್ದೂ ಒಳಗೊಂಡಂತೆ ತೀರ್ಮಾನ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಮೊದಲ ಪಟ್ಟಿ ಬಿಡುಗಡೆಯಾದಾಗಲೂ ಯಾವುದೇ ಸಮಸ್ಯೆ ಇರಲಿಲ್ಲ. 2ನೇ ಪಟ್ಟಿ ವೇಳೆ ಹಾಸನದ್ದು ಹೆಚ್ಚು ಪ್ರಚಾರವಾಗಿದೆ. ಹಾಸನ ವಿಚಾರದಿಂದ ಜನತಾದಳಕ್ಕೂ ಹೆಚ್ಚು ಪ್ರಚಾರವಾಗಿದೆ. ಇದರಿದ ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಶೇ.2-3 ರಷ್ಟು ಮತ ಪ್ರಮಾಣ ಹೆಚ್ಚಾಗಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಪಟ್ಟಿ ಬಿಡುಗಡೆಯಾಗದ ಕಾರಣ ಜೆಡಿಎಸ್ ಪಟ್ಟಿ ವಿಳಂಬವಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ನಾನು ಚಿಂತೆ ಮಾಡಿಲ್ಲ. ನಾವು ನಮ್ಮದೇ ರೀತಿಯಲ್ಲಿ ಅಭ್ಯರ್ಥಿಗಳನ್ನು ತೀರ್ಮಾನ ಮಾಡುತ್ತೇವೆ ಎಂದು ಉತ್ತರಿಸಿದರು.