ಒಂದೆಡೆ ಕೋವಿಡ್, ಇನ್ನೊಂದೆಡೆ ಚಿರತೆ ಹಾವಳಿ ಹನುಮದೀಕ್ಷೆಗೆ ಅಗ್ನಿಪರೀಕ್ಷೆ

ಹೊಸಪೇಟೆ, ನ.17: ಇಡೀ ಜಗತ್ತೇ ಕೋವಿಡ್19 ಮಹಾಮಾರಿಯಿಂದ ತತ್ತರಿಸುತ್ತಿದೆ, ಧಾರ್ಮಿಕ ಕೇಂದ್ರಗಳು ಕೊಂಚ ಚೇತರಿಸುತ್ತಿವೆ. ಪ್ರಖ್ಯಾತ ಹಾಗೂ ದೊಡ್ಡ ದೇವಾಲಯಗಳು ದರ್ಶನಕ್ಕೆ ಅವಕಾಶ ನೀಡುತ್ತಿವೆ. ಆದರೆ ವ್ರತ ಪೂಜಾದಿ ಕೈಗೊಳ್ಳುವ ಕೆಲ ಧಾರ್ಮಿಕ ಕೇಂದ್ರಗಳು ಇನ್ನೂ ಯಾವುದೇ ರೀತಿಯ ಚಟುವಟಿಕೆಗಳನ್ನು ಕೈಗೊಂಡಂತೆ ಕಾಣುತ್ತಿಲ್ಲ. ಅದರಲ್ಲಿ ಆಂಜನಾದ್ರಿ ಬೆಟ್ಟವೂ ಒಂದು.
ಆಂಜನೇಯನ ಜನ್ಮಸ್ಥಳವೆಂದು ಪುರಾಣ ಪ್ರಸಿದ್ಧಿ ಪಡೆದಿರುವ ಆಂಜನಾದ್ರಿ ಪರ್ವತಕ್ಕೆ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಅದೇ ರೀತಿ ಪುರುಷ ಭಕ್ತರು ವರ್ಷಕ್ಕೊಮ್ಮೆ ಹನುಮ ಮಾಲಾ ದೀಕ್ಷೆಯನ್ನು ಪಡೆದು ವ್ರತವನ್ನು ಆಚರಿಸುವ ಮುಖಾಂತರ ಹರಕೆಯನ್ನು ತೀರಿಸುತ್ತಾರೆ. ಪ್ರತಿವರ್ಷದಂತೆ ಈ ವರ್ಷವು ಹನುಮ ಮಾಲಾ ದೀಕ್ಷಾ ಧಾರಣೆ ಈ ತಿಂಗಳ 10ರಂದು ಆರಂಭವಾಗಿದ್ದು, ನಗರದ ಬಹುತೇಕ ಭಕ್ತರು ಹನುಮ ಮಾಲೆಯನ್ನು ಧರಿಸಿದ್ದಾರೆ. ಹೊಸಪೇಟೆಯಲ್ಲಿ ಅಧಿಕ ಭಕ್ತರೇ ಹನುಮ ದೀಕ್ಷೆಯನ್ನು ಧರಿಸುತ್ತಾರೆ. ಆದರೆ ದೇವಸ್ಥಾನದಲ್ಲಿ ದರ್ಶನಕ್ಕೆ ಅವಕಾಶ ಸಿಗುವುದೋ ಇಲ್ಲವೋ ಎಂಬ ಚಿಂತೆಯಲ್ಲಿದ್ದಾರೆ.
ಕರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ನಂತರ ಇತ್ತೀಚಿಗೆ ಧಾರ್ಮಿಕ ಕೇಂದ್ರಗಳಿಗೆ ಪ್ರವೇಶಕ್ಕೆ ಅನುಮತಿ ಸಿಕ್ಕಿದೆ. ಆದರೆ ಮಾಲಧಾರಣೆ ಮಾಡಿದ ಭಕ್ತರು. ಡಿಸೆಂಬರ್ ತಿಂಗಳಲ್ಲಿ ದೀಕ್ಷೆ ವಿಸರ್ಜನೆ ನಡೆಯುತ್ತದೆ. ಇದಕ್ಕಾಗಿ ವಿವಿಧ ಭಾಗಗಳಿಂದ ಮಾಲಾಧಾರಿಗಳು ಪಾದಯಾತ್ರೆ ಮೂಲಕ ಬೆಟ್ಟಕ್ಕೆ ಆಗಮಿಸುತ್ತಾರೆ. ಹಿಂದಿನ ದಿನ ಭಜನೆ, ಪೂಜೆಗಳನ್ನು ನೆರವೇರಿಸಿ ತ್ರಯೋದಶಿ ದಿನ ಮಾಲಾ ವಿಸರ್ಜನೆ ನೆರವೇರಿ‌ಸಲಾಗುತ್ತದೆ. ಆದರೆ ಕೋವಿಡ್19 ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡುವ ನಿಟ್ಟಿನಲ್ಲಿ ಬಹುಸಂಖ್ಯೆ ಭಕ್ತರನ್ನು ದರ್ಶನಕ್ಕೆ ಅವಕಾಶ ನೀಡುತ್ತಾರೋ ಇಲ್ಲವೋ ಎಂಬ ಗೊಂದಲದಲ್ಲಿ ಭಕ್ತರು ಇದ್ದಾರೆ.
ಚಿರತೆ ಕಾಟ:
ಕಳೆದ ವಾರದಿಂದ ಆನೆಗೊಂದಿ ಪ್ರದೇಶದಲ್ಲಿ ಚಿರತೆಯ ಓಡಾಟವಿದೆ ಎಂಬ ವದಂತಿ ಇದ್ದು, ದುರ್ಗಾಬೆಟ್ಟದಲ್ಲಿ ವ್ಯಕ್ತಿಯೊರ್ವನನ್ನು ಬಲಿ ಪಡೆದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ಓಡಾಡುತ್ತಿದೆ. ಈ ಹಿನ್ನಲೆಯಲ್ಲಿ ಆನೆಗೊಂದಿಯಲ್ಲಿನ ಪ್ರದೇಶಗಳ ವಿಜಯಲಕ್ಷ್ಮೀ ದೇವಾಲಯ, ಪಂಪಾಸರೋವರ ಹಾಗೂ ಅಂಜನಾದ್ರಿ ಬೆಟ್ಪಕ್ಕೂ ನ.11 ತಾತ್ಕಾಲಿಕ ಪ್ರವೇಶ ನಿಷೇಧಿಸಲಾಗಿದೆ.
ಧಾರ್ಮಿಕ ದತ್ತಿ ಇಲಾಖೆಯು ಶಬರಿಮಲೆ ದೇವಸ್ಥಾನದ ಪ್ರವೇಶಕ್ಕೆ ಸಂಬಂಧಿಸಿದಂತೆ ಕೇರಳ ಸರಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ರಾಜ್ಯದ ಭಕ್ತರಿಗೂ ಕರ್ನಾಟಕ ಸರ್ಕಾರ ಈಗಾಗಲೇ ಸೂಚಿಸಿದ್ದು ಅದರಂತೆ ಚಿರತೆ ಹಾವಳಿ ಕಡಿಮೆಯಾದ ನಂತರ ಸುರಕ್ಷಾ ಮಾರ್ಗಸೂಚಿಯನ್ನು ಹೊರಡಿಸಬೇಕು ಎಂಬುದು ಹನುಮ ಭಕ್ತರ ಆಗ್ರಹವಾಗಿದೆ. ಕೋವಿಡ್19 ನಡುವೆ ಚಿರತೆಯ ಹಾವಳಿ ಇದ್ದು, ಚಿರತೆ ಸೆರೆಸಿಕ್ಕ ಬಳಿಕ ದರ್ಶನಕ್ಕೆ ಅವಕಾಶವನ್ನು ದೇವಸ್ಥಾನದ ಆಡಳಿತ ಮಂಡಳಿ ನೀಡುವುದೋ ಕಾದು ನೋಡಬೇಕಿದೆ.

ನ.10ರಿಂದ 48 ದಿನಗಳ ವ್ರತ
ನ.16ರಿಂದ 42 ದಿನಗಳ ವ್ರತ
ನ.28ರಿಂದ 30 ದಿನಗಳ ವ್ರತ
ಡಿ.07ರಿಂದ 21 ದಿನಗಳ ವ್ರತ
ಡಿ.17ರಿಂದ 11 ದಿನಗಳ ವ್ರತ
ಡಿ.19ರಿಂದ 09 ದಿನಗಳ ವ್ರತ
ಡಿ.23ರಿಂದ 05 ದಿನಗಳ ವ್ರತ
ಡಿ.25ರಿಂದ 03 ದಿನಗಳ ವ್ರತ
ಡಿ.27ರಿಂದ 01 ದಿನದ ವ್ರತ ಆಚರಿಸಲಾಗುತ್ತದೆ.

ದೇವಸ್ಥಾನದ ಸುರಕ್ಷಾ ಮಾರ್ಗಸೂಚಿಯ ಅನುಸಾರ ವ್ರತಾಚರಣೆ ಆಚರಿಸುತ್ತೇವೆ. ಆದರೆ ಆಂಜನಾದ್ರಿಯ ದರ್ಶನಕ್ಕೆ ಅವಕಾಶ ಕಲ್ಪಿಸಲು ಆಡಳಿತ ಮಂಡಳಿ ನಿರ್ಧರಿಸಬೇಕು.
-ಜಗದೀಶ್ ಕಮಟಗಿ
ಶ್ರೀರಾಮ ಸೇನೆ, ತಾಲೂಕು ಅಧ್ಯಕ್ಷ

ಮೂರು ವರ್ಷದಿಂದ ಮಾಲಧಾರಣೆ ವ್ರತ ಆಚರಿಸುತ್ತಿದ್ದು, ಈ ಬಾರಿ ದರ್ಶನಕ್ಕೆ ಅವಕಾಶ ಸಿಗದಿದ್ದರೆ ಯಂತ್ರೋದ್ಧಾರಕ ದೇವಸ್ಥಾನದಲ್ಲೆ ಮಾಲಾ ವಿಸರ್ಜನೆ ನಡೆಸುತ್ತೇನೆ.
-ಕೆ. ತಿಮ್ಮ
ಹನುಮಭಕ್ತ.