ಒಂದೂ ಕ್ಷೇತ್ರ ದೊರಕದ ಸಿದ್ಧರಾಮಯ್ಯ: ಯತ್ನಾಳ ಲೇವಡಿ

ಧಾರವಾಡ,ನ.24: ರಾಜ್ಯದಲ್ಲಿ 160ಕ್ಕೂ ಹೆಚ್ಚು ಸಾಮಾನ್ಯ ಕ್ಷೇತ್ರಗಳಿದ್ದರೂ ಒಂದೇ ಒಂದು ವಿಧಾನಸಭಾ ಕ್ಷೇತ್ರವೂ ದೊರಕದೇ ವಿಪಕ್ಷ ನಾಯಕ ಸಿದ್ಧರಾಮಯ್ಯ ಪಡಿಪಾಟಲು ಪಡುವ ಸ್ಥಿತಿಯಲ್ಲಿದ್ದಾರೆ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಲೇವಡಿ ಮಾಡಿದರು.
ನಗರದಲ್ಲಿಂದು ಸುದ್ದಿಗರರೊಂದಿಗೆ ಮಾತನಾಡಿದ ಅವರು, ಸಿದ್ಧರಾಮಯ್ಯ ಒಮ್ಮೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗುತ್ತಾರೆ, ಇನ್ನೊಮ್ಮೆ ಬೀಳಗಿಗೆ ಬರುತ್ತಾರೆ, ಒಮ್ಮೆ ಕೋಲಾರಕ್ಕೆ ಹೋಗುತ್ತಾರೆ, ಮತ್ತೊಮ್ಮೆ ಬಾದಾಮಿಗೆ ಬರುತ್ತಾರೆ, ಹೀಗೆ `ಪೃಷ್ಠ’ ಸುಟ್ಟ ಬೆಕ್ಕಿನಂತೆ ಓಡಾಡುವ ಸ್ಥಿತಿ ಸಿದ್ಧರಾಮಯ್ಯನವರದಾಗಿದೆ ಎಂದು ವ್ಯಂಗ್ಯವಾಡಿದರು.
ಸಿದ್ಧರಾಮಯ್ಯ ಓರ್ವ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‍ನ ಓರ್ವ ಮುಂದಿನ ಮುಖ್ಯಮಂತ್ರಿ ಎಂದ ಸ್ವಯಂ ಘೋಷಿತ ವ್ಯಕ್ತಿಗೆ ಒಂದೂ ವಿಧಾನಸಭಾ ಕ್ಷೇತ್ರ ಸಿಗುತ್ತಿಲ್ಲವೆಂದರೆ ಇನ್ನು ಕಾಂಗ್ರೆಸ್‍ನ ಸ್ಥಿತಿ ಹೇಗಿರಬೇಡ? ಎಂದು ಯತ್ನಾಳ ಚುಚ್ಚಿದರು.
ಸಿದ್ಧರಾಮಯ್ಯ, ಡಿಕೆಶಿ ಸ್ಪರ್ಧೆ ಬೇಡ ಎಂದು ಸಂತೋಷ ಲಾಡ್‍ರವರು ನೀಡಿದ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸುತ್ತ ಅವರಿಬ್ಬರೂ ಸೋಲುತ್ತಾರೆಂದು ಅನಿಸಿದ್ದರಿಂದಲೇ ಲಾಡ್ ಹಾಗೆ ಹೇಳಿರಬೇಕು ಎಂದವರು ನುಡಿದರು.
ಮಂಗಳೂರು ಕುಕ್ಕರ್ ಸ್ಫೋಟಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸುತ್ತ ಈ ಕುರಿತಾದ ತನಿಖೆಯಲ್ಲಿ ಯಾವುದೇ ವೈಫಲ್ಯವಾಗಿಲ್ಲ, ತನಿಖೆ ಇನ್ನೂ ನಡೆಯುತ್ತಿದೆ ಎಂದು ಅವರು ಹೇಳಿದರು.