ಒಂದೂವರೆ ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು

ನವದೆಹಲಿ,ಏ.೧೧- ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ನಿತ್ಯ ನಾಗಾಲೋಟದಲ್ಲಿ ಸಾಗುತ್ತಿದೆ. ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿರುವುದು ದೇಶವನ್ನು ಬೆಚ್ಚಿಬೀಳಿಸಿದೆ.
ಮೊದಲನೇ ಅಲೆಗಿಂತ ಎರಡನೇ ಅಲೆಯ ಪ್ರಸರಣ ವೇಗ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಇದರಿಂದಾಗಿ ಪ್ರತಿ ನಿತ್ಯ ಸೋಂಕು ದಾಖಲೆ ಬರೆಯುತ್ತಿದೆ. ಸೋಂಕಿನ ಜೊತೆಗೆ ಸಾವಿನ ವಿಷಯದಲ್ಲಿಯೂ ದೇಶದಲ್ಲಿ ನಿತ್ಯ ದಾಖಲೆ.
ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೧,೫೨,೮೭೯ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ೮೩೯ ಮಂದಿ ಸಾವನ್ನಪ್ಪಿದ್ದಾರೆ. ೯೦,೫೮೪ ಮಂದಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಬೆಳಿಗ್ಗೆ ೮ ಗಂಟೆವರೆಗೆ ದಾಖಲಾಗಿರುವ ಹೊಸಪ್ರಕರಣ ಸೇರಿದಂತೆ ಇಲ್ಲಿಯವರೆಗೆ ಒಟ್ಟಾರೆ ಸೋಂಕಿನ ಸಂಖ್ಯೆ ೧,೩೩,೫೮,೮೦೫ಕ್ಕೆ ಏರಿಕೆಯಾಗಿದೆ. ೧,೨೦,೮೧,೪೪೩ ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಇಲ್ಲಿಯವರೆಗೆ ೧,೬೯,೨೭೫ ಮಂದಿ ಮೃತಪಟ್ಟಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಛತ್ತೀಸ್‌ಗಡ, ಮಧ್ಯ ಪ್ರದೇಶ, ಚಂಡಿಘಡ, ಪಂಜಾಬ್, ಹರಿಯಾಣ, ದೆಹಲಿ, ಪಶ್ಚಿಮ ಬಂಗಾಳ ಸೇರಿದಂತೆ, ವಿವಿಧ ರಾಜ್ಯಗಳಲ್ಲಿ ನಿತ್ಯ ಸೋಂಕು ಸಂಖ್ಯೆ ದಾಖಲೆ ಬರೆಯುತ್ತಿದೆ.
ಅದರಲ್ಲಿಯೂ ಮಹಾರಾಷ್ಟ್ರ ಒಂದರಲ್ಲಿ ಸೋಂಕಿನ ಸಂಖ್ಯೆಯ ವೇಗ ಶರವೇಗದಲ್ಲಿ ಹೆಚ್ಚಾಗುತ್ತಿದ್ದು ದೇಶದ ಒಟ್ಟಾರೆ ಸೋಂಕಿನ ಪೈಕಿ ಶೇ. ಅರ್ಧಕ್ಕಿಂತ ಹೆಚ್ಚಿನ ಮಂದಿ ಒಂದೇ ದೇಶದಲ್ಲಿ ದಾಖಲಾಗುತ್ತಿದೆ.
ಮಹಾರಾಷ್ಟ್ರ, ಮಧ್ಯ ಪ್ರದೇಶ ,ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸೋಂಕು ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗೆ ರಾತ್ರಿ ಕರ್ಫ್ಯೂ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ.
೧೧ ಲಕ್ಷಕ್ಕೆ ಏರಿಕೆ ಸಕ್ರಿಯ ಪ್ರಕರಣ
ದೇಶದಲ್ಲಿ ಎರಡು ತಿಂಗಳ ಹಿಂದೆ ೧.೩೫ ಲಕ್ಷ ಇದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ ೧೧ ಲಕ್ಷ ಗಡಿ ದಾಟಿದೆ. ಇದರಿಂದಾಗಿ ದೇಶದ ವಿವಿಧ ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ಲಸಿಕೆಯ ಕೊರತೆ ಎದುರಾಗಿದೆ.
ಇದರಿಂದ ಸೋಂಕಿತರು ಮತ್ತಷ್ಟು ಸಮಸ್ಯೆಗೆ ಸಿಲುಕುವಂತಾಗಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆತಂಕಕ್ಕೆ ಸಿಲುಕುವಂತೆ ಮಾಡಿದೆ.
ಸದ್ಯ ದೇಶದಲ್ಲಿ ೧೧,೦೮,೦೮೭ ಮಂದಿಗೆ ಸಕ್ರಿಯ ಪ್ರಕರಣ ಇದ್ದು, ಪ್ರತಿದಿನ ೧ ಲಕ್ಷ ಆಜುಬಾಜಿನಲ್ಲಿ ಸಕ್ರಿಯ ಪ್ರಕರಣ ಹೆಚ್ಚಾಗುತ್ತಿದೆ.

೧೦ ಕೋಟಿಗೂ ಅಧಿಕ ಲಸಿಕೆ
ದೇಶದಲ್ಲಿ ಒಂದೆಡೆ ಸೋಂಕು ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು ಮತ್ತೊಂದು ಕಡೆ ಲಸಿಕೆ ಹಾಕುವ ಕಾರ್ಯ ಭರದಿಂದ ಸಾಗಿದೆ.
ದೇಶದಲ್ಲಿ ಇಲ್ಲಿಯವರೆಗೆ ೧೦,೧೫,೯೫,೧೪೭ ಮಂದಿಗೆ ಲಸಿಕೆ ಹಾಕಲಾಗಿದೆ. ದೇಶದಲ್ಲಿ ನಿತ್ಯ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ “ತಿಕಾ ಉತ್ಸವ”ವನ್ನು ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

೨೫.೬೬ ಕೋಟಿಗೆ ಪರೀಕ್ಷೆ
ದೇಶದಲ್ಲಿ ನಿತ್ಯ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಪತ್ತೆ ಪರೀಕ್ಷೆಯನ್ನು ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
ನಿನ್ನೆ ದೇಶದಲ್ಲಿ ೧೪,೧೨,೦೪೭ ಮಂದಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ ೨೫,೬೬,೨೬,೮೫೦ ಮಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.