ಒಂದೂವರೆ ತಿಂಗಳಲ್ಲೇ 3 ಗ್ಯಾರಂಟಿ ಜಾರಿ

ಕಲಬುರಗಿ,ಜು 1: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಒಂದೂವರೆ ತಿಂಗಳಲ್ಲೇ ಕಾಂಗ್ರೆಸ್ ಸರ್ಕಾರ ತನ್ನ ಐದು ಗ್ಯಾರಂಟಿಗಳ ಪೈಕಿ ಮೂರು ಗ್ಯಾರಂಟಿಗಳನ್ನು ಜಾರಿಗೆ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.ಈ ಕುರಿತು ಟ್ವಿಟ್ ಮಾಡಿದ ಅವರು ಜೂನ್ 11 ರಿಂದ ಶಕ್ತಿ ಯೋಜನೆ ಜಾರಿಯಾಗಿದ್ದು, ಪ್ರತಿದಿನ ಸುಮಾರು 55 ಲಕ್ಷಕ್ಕೂ ಹೆಚ್ಚು ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಿ ಉಚಿತ ಬಸ್ ಪ್ರಯಾಣದ ಪ್ರಯೋಜನೆ ಪಡೆಯುತ್ತಿದ್ದಾರೆ.
ಇಂದಿನಿಂದ ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಗ್ಯಾರಂಟಿ ಕೂಡಾ ಜಾರಿಯಾಗುತ್ತಿದೆ. ಅದರಂತೆ ಗೃಹಲಕ್ಷ್ಮಿ ಯೋಜನೆ ಅಗಷ್ಟ್ 15 ರಿಂದ ಜಾರಿಯಾಗಲಿದೆ.
ಈ ಮೂಲಕ ಕಾಂಗ್ರೆಸ್ ಸರ್ಕಾರವು ಚುನಾವಣೆಗೂ ಮುನ್ನ ಜನರಿಗೆ ನೀಡಿದ್ದ ಪ್ರತಿಯೊಂದು ಭರವಸೆಯನ್ನೂ ಈಡೇರಿಸಲು ತನ್ನೆಲ್ಲ ಶ್ರಮವಹಿಸಿ ಕಾರ್ಯ ನಿರ್ವಹಿಸುತ್ತಿದೆ.ನುಡಿದಂತೆ ನಡೆದು, ಸರ್ಕಾರದ ಮೇಲೆ ಜನರ ನಂಬಿಕೆಯನ್ನು ಮರುಸ್ಥಾಪಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಸಚಿವರು ಹೇಳಿದ್ದಾರೆ.