ಒಂದು ಸಾವಿರ ಗ್ರಾಮ ಆಡಳಿತಾಧಿಕಾರಿ ಹುದ್ದೆ ಭರ್ತಿ

ಬೆಂಗಳೂರು, ಫೆ. ೧೯- ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಕ್ರಮ ಕೈಗೊಂಡಿದ್ದು, ಈ ವರ್ಷದಲ್ಲಿ ೧ ಸಾವಿರ ಗ್ರಾಮ ಆಡಳಿತಾಧಿಕಾರಿ (ಗ್ರಾಮ ಲೆಕ್ಕಿಗ) ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ವಿಧಾನಸಭೆಯಲ್ಲಿಂದು ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಕಿರಣ್‌ಕುಮಾರ್ ಕೂಡಿಗಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ೧ ಸಾವಿರ ಗ್ರಾಮ ಆಡಳಿತಾಧಿಕಾರಿಗಳ ಹುದ್ದೆ ಭರ್ತಿಗೆ ಇನ್ನೊಂದು ತಿಂಗಳ ಒಳಗೆ ಅಧಿಸೂಚನೆ ಹೊರಡಿಸುತ್ತೇವೆ. ಒಂದು ವರ್ಷದಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದರು.
ರಾಜ್ಯದ ವಿವಿಧೆಡೆ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳು ಖಾಲಿ ಇದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ತಪ್ಪಿಸಲು ಹೊಸದಾಗಿ ಸಾವಿರ ಗ್ರಾಮ ಆಡಳಿತಾಧಿಕಾರಿಗಳ ಹುದ್ದೆ ನೇಮಕಾತಿಗೆ ತೀರ್ಮಾನ ಮಾಡಿದ್ದೇವೆ ಎಂದು ಅವರು ಹೇಳಿದರು.
ನಿಯೋಜನೆ ರದ್ದು
ಕಂದಾಯ ಇಲಾಖೆಗೆ ನೇಮಕಗೊಂಡು ನಿಯೋಜನೆ ಮೇಲೆ ಬೇರೆ ಕಡೆ ಕೆಲಸ ಮಾಡುತ್ತಿರುವ ಕಂದಾಯ ಇಲಾಖೆ ನೌಕರರ ನಿಯೋಜನೆ ರದ್ದು ಮಾಡಿ ಮಾತೃ ಇಲಾಖೆಗೆ ಕರೆತರುವ ಪ್ರಯತ್ನ ನಡೆದಿದೆ. ನಾವು ಈ ಹಿಂದಿನ ಸರ್ಕಾರದಲ್ಲಿ ಸಾವಿರಾರು ನಿಯೋಜನೆಗಳನ್ನು ಮಾಡಲಾಗಿದೆ. ನಾನು ಕಂದಾಯ ಸಚಿವನಾದ ಮೇಲೆ ಒಬ್ಬ ಕಂದಾಯ ಇಲಾಖೆ ನೌಕರರ ನಿಯೋಜನೆಗೆ ಒಪ್ಪಿಗೆ ನೀಡಿಲ್ಲ. ನನ್ನ ಕಣ್ತಪ್ಪಿಸಿ ಅಧಿಕಾರಿಗಳು ನಿಯೋಜನೆ ಮಾಡಿದ್ದರೆ ಆ ಬಗ್ಗೆಯೂ ಗಮನ ಹರಿಸುತ್ತೇನೆ. ನಾನಂತೂ ನಿಯೋಜನೆಗೆ ಒಪ್ಪಿಗೆ ನೀಡುತ್ತಿಲ್ಲ. ಇದರಿಂದ ನಮ್ಮ ಪಕ್ಷದ ಶಾಸಕರು ಬೇಸರ ಮಾಡಿಕೊಂಡಿದ್ದಾರೆ. ಪರವಾಗಿಲ್ಲ, ಕಂದಾಯ ನೌಕರರನ್ನು ನಿಯೋಜನೆ ಮಾಡಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಇಲ್ಲಿ ವೈಯುಕ್ತಿಕ ಹಿತಕ್ಕಿಂತ ಸಾರ್ವಜನಿಕರ ಹಿತ ಮುಖ್ಯ ಎಂದರು.
ಕುಂದಾಪುರ ತಾಲ್ಲೂಕಿನಲ್ಲಿ ೧೯ ಕಂದಾಯ ಇಲಾಖೆ ನೌಕರರು ನಿಯೋಜನೆ ಮೇಲೆ ಇದ್ದಾರೆ ಎಂಬ ಮಾಹಿತಿಯನ್ನು ಸದಸ್ಯರು ನೀಡಿದ್ದಾರೆ. ಇವರಲ್ಲಿ ತುರ್ತು ಕೆಲಸದ ಮೇಲಿರುವ ನೌಕರರಿಗೆ ವಿನಾಯ್ತಿ ನೀಡಿ, ಉಳಿದ ೧೪ ನೌಕರರ ನಿಯೋಜನೆಯನ್ನು ರದ್ದು ಮಾಡುವಂತೆ ಆದೇಶ ಮಾಡಲು ಜಿಲ್ಲಾಧಿಕಾರಿಗಳಿಗೆ ಇದೇ ಸೂಚನೆ ಕೊಡುತ್ತೇನೆ ಎಂದು ಸಚಿವರು ಹೇಳಿದರು.
ತರಬೇತಿ
ಕಂದಾಯ ಇಲಾಖೆಗೆ ಸೇರಿಕೊಂಡಿರುವ ನೌಕರರಿಗೆ ತರಬೇತಿ ಅವಶ್ಯ.ಕಂದಾಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಬಹುತೇಕರಿಗೆ ಜ್ಞಾನವೇ ಇಲ್ಲ. ಕೆಲ ಬುದ್ದಿವಂತರು, ಚುರುಕಾಗಿರುವವರು ಕೆಲಸ ಕಲಿತ್ತಿದ್ದಾರೆ. ನಾನು ಹಲವು ಕಚೇರಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ೨೦೧೪ರ ನಂತರ ಕಂದಾಯ ಇಲಾಖೆಗೆ ನೇಮಕಗೊಂಡಿರುವವರಿಗೆ ಬಹುತೇಕರಿಗೆ ಕಂದಾಯ ಕಾಯ್ದೆ, ಕೆಲಸಗಳ ಬಗ್ಗೆ ಜ್ಞಾನದ ಕೊರತೆ ಇದೆ. ಇವರಿಗೆ ತರಬೇತಿ ನೀಡುವ ಅಗತ್ಯವಿದ್ದು, ಹಂತ ಹಂತವಾಗಿ ತರಬೇತಿ ನೀಡುವ ಕೆಲಸವನ್ನು ಇಲಾಖೆ ಮಾಡಲಿದೆ ಎಂದು ಸಚಿವ ಕೃಷ್ಣ ಭೇರೈಗೌಡ ಹೇಳಿದರು.