ಒಂದು ಸಾವಿರ ಐಸಿಯು ಬೆಡ್ ಆಸ್ಪತ್ರೆ ನಿರ್ಮಾಣಕ್ಕೆ ಪಾಲಿಕೆ ಚಿಂತನೆ


ಬೆಂಗಳೂರು, ಏ.೨೨- ಕೋವಿಡ್ ಎರಡನೇ ಅಲೆ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ಉಸಿರಾಟ ಸಮಸ್ಯೆ ತೀವ್ರ ಉಲ್ಬಣಗೊಳ್ಳುತ್ತಿರುವ ಕಾರಣ ೧ ಸಾವಿರ ಬೆಡ್ ಸಾಮರ್ಥ್ಯವುಳ್ಳ ಐಸಿಯು ಬೆಡ್ ಆಸ್ಪತ್ರೆ ನಿರ್ಮಿಸುವ ಚಿಂತನೆ ಇದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನೇ ದಿನೇ ಐಸಿಯು ಬೆಡ್ ಗಳ ಬೇಡಿಕೆ ಹೆಚ್ಚುತ್ತಿದೆ. ಸದ್ಯಕ್ಕೆ ೬೦೦ಕ್ಕೂ ಐಸಿಯು ಬೆಡ್ ಗಳ ಸಾಮರ್ಥ್ಯವಿದ್ದರೂ, ಬಹುತೇಕ ಲಭ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಇದರ ಸಾಮರ್ಥ್ಯ ಹೆಚ್ಚಿಸುವ ಗುರಿ ಇದೆ. ಜೊತೆಗೆ, ಪ್ರತ್ಯೇಕ ಐಸಿಯು ಬೆಡ್ ಆಸ್ಪತ್ರೆ ನಡುವೆ ನಿರ್ಮಿಸುವ ಚಿಂತನೆ ಇದ್ದು, ಸರ್ಕಾರದೊಂದಿಗೆ ಚರ್ಚೆ ನಡೆಸಲಾಗಿದೆ ಎಂದರು.
ಕೊರೋನಾ ಪಾಸಿಟಿವ್ ಬಂದ ಕೂಡಲೇ ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ. ಶೇ.೮೦ರಷ್ಟು ಜನರು ಮನೆಯಲ್ಲಿಯೇ ಇದ್ದು ವಾಸಿ ಮಾಡಿಕೊಳ್ಳಬಹುದು. ನಗರದಲ್ಲಿ ಸಾಮಾನ್ಯ ಹಾಸಿಗೆಗಳ ಕೊರತೆಯಿಲ್ಲ. ಆದರೆ, ಐಸಿಯು ಹಾಸಿಗೆಗಳ ಕೊರತೆಯಿದೆ. ಸಹಾಯವಾಣಿ ಮೂಲಕ ಹಾಸಿಗೆ ಅಲಾಟ್ ಮಾಡಿಕೊಂಡು ಹೋದರೆ ಯಾವುದೇ ಸಮಸ್ಯೆಗಳಿಲ್ಲ. ಹಾಸಿಗೆ ಕೊರತೆ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕೊರೋನಾ ಪಾಸಿಟಿವ್ ಬಂದ ಕೂಡಲೇ ಆಸ್ಪತ್ರೆಗೆ ದಾಖಗಬೇಕು ಎನ್ನುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದ ಅವರು, ಜನರು ಮನೆಯಲ್ಲಿಯೇ ಇದ್ದು ವಾಸಿ ಮಾಡಿಕೊಳ್ಳಬಹುದು. ಇದರಿಂದ ಐಎಲ್‌ಐ, ಸಾರಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಐಸಿಯುವಿನಲ್ಲಿ ಹಾಸಿಗೆ ಒದಗಿಸಲು ಸಹಕಾರಿಯಾಗುತ್ತದೆ. ಸಮಸ್ಯೆಯನ್ನು ಅರಿತು ಜನರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಕ್ರಮ: ಶೇಕಡ ೫೦ ರಷ್ಟು ಬೆಡ್ ಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡ ಬೇಕು ಎಂದು ಈಗಾಗಲೇ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ.ಕೆಲವರು ಇದಕ್ಕೆ ಸ್ಪಂದಿಸಿದರೆ, ಮತ್ತೆ ಕೆಲವರು ಯಾವುದೇ ಉತ್ತರ ನೀಡಿಲ್ಲ.ಹೀಗಾಗಿ ನಿರ್ಲಕ್ಷ್ಯ ವಹಿಸುವ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.