ಒಂದು ವಾರದ ಹಿಂದೆಯೇ ಶೂಟೌಟ್‌ಗೆ ಸಿದ್ಧತೆ

ಬೆಲಗ್ರೇಡ್ (ಸರ್ಬಿಯಾ), ಮೇ ೪- ಅಪ್ರಾಪ್ತ ವಿದ್ಯಾರ್ಥಿಯೊಬ್ಬ ತನ್ನ ೮ ಮಂದಿ ಸಹಪಾಠಿ ವಿದ್ಯಾರ್ಥಿಗಳು ಹಾಗೂ ಭದ್ರತಾ ಸಿಬ್ಬಂದಿಯನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬೆಚ್ಚಿಬೀಳಿಸುವ ಸಂಗತಿ ಹೊರಬಿದ್ದಿದೆ. ಕೃತ್ಯ ನಡೆಸಿದ ವಿದ್ಯಾರ್ಥಿ ಕಳೆದ ಒಂದು ವಾರದಿಂದ ಶೂಟೌಟ್‌ಗೆ ಸಿದ್ಧತೆ ನಡೆಸಿದ್ದು, ಇದಕ್ಕಾಗಿ ಆತ ಹತ್ಯೆ ನಡೆಸಲಿರುವ ವಿದ್ಯಾರ್ಥಿಗಳ ಒಂದು ಪಟ್ಟಿಯನ್ನೇ ಸಿದ್ಧಪಡಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸರ್ಬಿಯಾ ರಾಜಧಾನಿ ಕೇಂದ್ರ ಬೆಲ್‌ಗ್ರೇಡ್‌ನಲ್ಲಿರುವ ವ್ಲಾಡಿಸ್ಲಾವ್ ರಿಬ್ನಿಕರ್ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಬೆಳಗ್ಗೆ ನಡೆದ ಶೂಟೌಟ್‌ನಲ್ಲಿ ಏಳು ವಿದ್ಯಾರ್ಥಿನಿಯರು ಹಾಗೂ ಓರ್ವ ವಿದ್ಯಾರ್ಥಿ ಸೇರಿದಂತೆ ೮ ವಿದ್ಯಾರ್ಥಿಗಳು ಹಾಗೂ ಓರ್ವ ಭದ್ರತಾ ಸಿಬ್ಬಂದಿ ಕೂಡ ಮೃತಪಟ್ಟಿದ್ದರು. ಅಲ್ಲದೆ ಆರು ಮಂದಿ ವಿದ್ಯಾರ್ಥಿಗಳು ಹಾಗೂ ಓರ್ವ ಶಿಕ್ಷಕಿ ಗಂಭೀರ ರೀತಿಯಲ್ಲಿ ಗಾಯಗೊಂಡಿದ್ದರು. ಇನ್ನು ಶೂಟೌಟ್ ನಡೆಸಿದ ಕಾರಣ ಇನ್ನೂ ಬಹಿರಂಗವಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿ ನಡೆಸಿದ ವಿದ್ಯಾರ್ಥಿಯು ಕೃತ್ಯ ನಡೆಸಲು ತಂದೆಯ ಬಂದೂಕುಗಳನ್ನು ಬಳಸಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಅಲ್ಲದೆ ಇವೆರಡೂ ಬಂದೂಕುಗಳು ಪರವಾನಗಿಯನ್ನು ಹೊಂದಿದ್ದವು ಎನ್ನಲಾಗಿದೆ. ಕೃತ್ಯ ನಡೆಯುವುದಕ್ಕೂ ಮುನ್ನ ವಿದ್ಯಾರ್ಥಿಯು ಹಲವು ಬಾರಿ ತನ್ನ ತಂದೆಯೊಂದಿಗೆ ಒಂದಕ್ಕಿಂತ ಹೆಚ್ಚು ಬಾರಿ ಶೂಟಿಂಗ್ ರೇಂಜ್‌ಗೆ ಹೋಗಿದ್ದ ಎನ್ನಲಾಗಿದೆ. ಇನ್ನು ಕೃತ್ಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಯ ತಂದೆ ಹಾಗೂ ತಾಯಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ದಾಳಿಗಾಗಿ ವಿದ್ಯಾರ್ಥಿಯು ಒಂದು ತಿಂಗಳ ಕಾಲ ಯೋಜನೆ ಮಾಡಿದ್ದ. ಯಾವ ವಿದ್ಯಾರ್ಥಿಗಳ ಮೇಲೆ ಹಾಗೂ ಯಾವ ತರಗತಿಗೆ ನುಗ್ಗಬೇಕು ಎಂಬ ಕುರಿತು ವಿದ್ಯಾರ್ಥಿ ಒಂದು ಪಟಿಯನ್ನೇ ತಯಾರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಘಟನೆಯಲ್ಲಿ ಮೃತಪಟ್ಟ ಬಹುತೇಕ ವಿದ್ಯಾರ್ಥಿಗಳು ೧೩-೧೪ ವರ್ಷದ ಒಳಗಿನವರು ಎನ್ನಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಗಿದೆ. ದಾಳಿ ನಡೆಸಿದ ವಿದ್ಯಾರ್ಥಿ ೧೪ ವರ್ಷದೊಳಗಿನ ಹಿನ್ನೆಲೆಯಲ್ಲಿ ಸದ್ಯ ಆತನನ್ನು ಮನೋವೈದ್ಯಕೀಯ ಚಿಕಿತ್ಸಾಲಯಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ.
ಇತಿಹಾಸದಲ್ಲೇ ಕಠಿಣ ದಿನ
ಗುಂಡಿನ ದಾಳಿ ಪ್ರಕರಣವು ನಮ್ಮ ದೇಶದ ಆಧುನಿಕ ಇತಿಹಾಸದಲ್ಲೇ ಅತ್ಯಂತ ಕಷ್ಟಕರ ದಿನವಾಗಿದೆ. ದಾಳಿ ನಡೆಸಿದ ವಿದ್ಯಾರ್ಥಿಯನ್ನು ಮನೋವೈದ್ಯಕೀಯ ಚಿಕಿತ್ಸಾಲಯಕ್ಕೆ ಕಳುಹಿಸಲಾಗಿದೆ. ಬಂದೂಕುಗಳ ಪರವಾನಗಿಗಳ ಲೆಕ್ಕಪರಿಶೋಧನೆ ಮತ್ತು ಶೂಟಿಂಗ್ ರೇಂಜ್‌ಗಳನ್ನು ಯಾರು ಪ್ರವೇಶಿಸಬಹುದು ಎಂಬುದರ ಸುತ್ತಲಿನ ನಿಯಮಗಳನ್ನು ಬಿಗಿಗೊಳಿಸುವುದು ಸೇರಿದಂತೆ ಹಲವಾರು ಇತರ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
-ಅಲೆಕ್ಸಾಂಡರ್ ವುಸಿಕ್, ಸರ್ಬಿಯಾ ಅಧ್ಯಕ್ಷ