ಒಂದು ವಾರದೊಳಗಾಗಿ ಹಂದಿ ಸ್ಥಳಾಂತರಿಸಲು ಮಾಲೀಕರಿಗೆ ಸೂಚನೆ

ಕಲಬುರಗಿ.ಮಾ.18:ಕಲಬುರಗಿ ನಗರದ ವಿವಿಧ ಬಡಾವಣೆಗಳಲ್ಲಿ ಅನಧೀಕೃತವಾಗಿ ಹಾಗೂ ಅಕ್ರಮವಾಗಿ ಬಿಟ್ಟಿರುವ ಹಂದಿಗಳ ಮಾಲೀಕರು ತಮ್ಮ ತಮ್ಮ ಹಂದಿಗಳನ್ನು ಹಿಡಿದು ಒಂದು ವಾರದೊಳಗಾಗಿ (7 ದಿನಗಳು) ನಗರ ಪ್ರದೇಶದಿಂದ ಹೊರಗಡೆ ಸಾಗಿಸಲು ಕೊನೆಯ ಅವಕಾಶ ನೀಡಲಾಗಿದ್ದು, ಇದಕ್ಕೆ ತಪ್ಪಿದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಅವರು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಹಂದಿ ಹಿಡಿಯುವ ತಂಡವನ್ನು ಕರೆಯಿಸಿ ನಗರದಲ್ಲಿರುವ ಹಂದಿಗಳನ್ನು ಹಿಡಿದು ಬೇರೆ ಸ್ಥಳಕ್ಕೆ ಸಾಗಿಸಲು ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ. ಕಲಬುರಗಿ ನಗರದಲ್ಲಿರುವ ಹಂದಿ ಮಾಲೀಕರು ಹಾಗೂ ಕೆಲ ಹಂದಿ ಮಾಂಸದ ವ್ಯಾಪಾರ ಮಾಡುವವರು ಮಹಾನಗರ ಪಾಲಿಕೆಯ ವಿವಿಧ ಬಡಾವಣೆಯ ಸರ್ಕಾರಿ ಮತ್ತು ಸಾರ್ವಜನಿಕ ಸ್ಥಳ/ನಿವೇಶನಗಳಲ್ಲಿ ಹಾಗೂ ರಸ್ತೆಗಳಲ್ಲಿ ಅನಧಿಕೃತವಾಗಿ ಹಾಗೂ ಅಕ್ರಮವಾಗಿ ಹಂದಿ ಸಾಕಾಣಿಕೆ ಮಾಡುತ್ತಿದ್ದಾರೆ. ಈ ಹಿಂದೆ ನಗರದ ಹಂದಿ ಮಾಲೀಕರಿಗೆ ಏಳು ಬಾರಿ ನೋಟಿಸ್ ಜಾರಿ ಮಾಡಿ ನಗರ ಪ್ರದೇಶದಿಂದ ತಮ್ಮ ತಮ್ಮ ಹಂದಿಗಳನ್ನು ಹಿಡಿದು ನಗರದಿಂದ ಹೊರಗಡೆ ಸ್ಥಳಾಂತರಿಸಲು ಕೋರಲಾಗಿತ್ತು. ಆದರೂ ಹಂದಿ ಮಾಲೀಕರು ಪಾಲಿಕೆಯ ಕರೆಗೆ ಸ್ಪಂದಿಸಿಲ್ಲ ಎಂದು ಅವರು ಆಯುಕ್ತರು ತಿಳಿಸಿದ್ದಾರೆ.

ನಗರದಲ್ಲಿ ಹಂದಿಗಳ ಹಾವಳಿ ನಿಯಂತ್ರಿಸಲು ಹಾಗೂ ಸ್ವಚ್ಛತೆಯನ್ನು ಕಾಪಾಡಲು ನಗರದ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಸಾರ್ವಜನಿಕ ಸ್ಥಳದಲ್ಲಿ ಹಂದಿಗಳ ಹಾವಳಿಯಿಂದ ವಿವಿಧ ಸಾಂಕ್ರಾಮಿಕ ರೋಗ-ರುಜಿನ ಹರಡುವ ಸಾಧ್ಯತೆ ಇರುತ್ತದೆ. ಈಗಾಗಲೇ ಹಂದಿಗಳ ಹಾವಳಿ ನಿಯಂತ್ರಣಕ್ಕೆ ಬೇರೆ ಜಿಲ್ಲೆಯಿಂದ ಹಂದಿ ಹಿಡಿಯುವ ತಂಡವನ್ನು ಕರೆತಂದು ಹಂದಿಗಳ ಸ್ಥಳಾಂತರಕ್ಕೆ ಕ್ರಮಕೈಗೊಳ್ಳಲಾಗಿದೆ.

ಸಾರ್ವಜನಿಕರು ತಮ್ಮ ಮನೆಗಳ ಕಸ ಹಾಗೂ ಮುಸರಿಯನ್ನು ರಸ್ತೆ ಮೇಲೆ ಹಾಗೂ ಹೊರಗಡೆ ಎಸೆಯಬಾರದು. ಇದರಿಂದ ಹಂದಿ ಹಾಗೂ ಬಿಡಾಡಿ ನಾಯಿಗಳ ಹಾವಳಿ ಹೆಚ್ಚಾಗುವುದರ ಜೊತೆಗೆ ನಗರದ ಸ್ವಚ್ಛತೆ ಹಾಳಾಗುತ್ತದೆ ಎಂದು ಅವರು ತಿಳಿಸಿದ್ದಾರೆ.