ಒಂದು ವರ್ಷದಲ್ಲಿ ಕೋಲಾರ ಜಿಲ್ಲೆ ಅಭಿವೃದ್ಧಿ ಜಿಲ್ಲೆಗಳ ಪಟ್ಟಿಗೆ

ಕೋಲಾರ,ಜು,೭-ರಾಜ್ಯದ ೩೧ ಜಿಲ್ಲೆಗಳಲ್ಲಿ ಕೋಲಾರ ಜಿಲ್ಲೆ ಅಭಿವೃದ್ಧಿಯಲ್ಲಿ ೩೦ನೇ ಸ್ಥಾನದಲ್ಲಿದೆ, ನಗರ ಹಾಗೂ ಪಟ್ಟಣ ಪಂಚಾಯ್ತಿತಿಗಳ ಸ್ವಚ್ಚತೆಯಿಂದ ಹಿಡಿದು ಮೂಲಭೂತ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ, ಇದಕ್ಕೆ ಕಾರಣ ಇಲಾಖೆಯಗಳಲ್ಲಿನ ಸಿಬ್ಬಂದಿ ಕೊರತೆ ಇದೆ, ಒಂದು ವರ್ಷದಲ್ಲಿ ಕೋಲಾರ ಜಿಲ್ಲೆ ೨೭ನೇ ಸ್ಥಾನಕ್ಕೆ ಏರದ್ದಂತೆ ಅಭಿವೃದ್ಧಿಯಲ್ಲಿ ೧ನೇ ಸ್ಥಾನ ಪಡೆಯಲು ಸಾಧ್ಯವಾಗದಿದ್ದರೂ ಅಭಿವೃದ್ಧಿ ಸಾಧಿಸಿರುವ ಜಿಲ್ಲೆಗಳ ಪಟ್ಟಿಗೆ ಸೇರಿಸಲು ಶ್ರಮಿಸುವುದಾಗಿ ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಈಗಾಗಲೇ ಹಾಸನ ಜಿಲ್ಲಾಧಿಕಾರಿಯಾಗಿದ್ದಾಗ ಶಿಕ್ಷಣಕ್ಕೆ ಹೆಚ್ಚು ಹೊತ್ತು ಕೊಟ್ಟಿದ್ದೇನೆ ಹಾಗೆಯೇ ವಿವಿಧ ಇಲಾಖೆಯಲ್ಲಿ ಸೇವೆಸಲ್ಲಿಸಿದ್ದ ಸಂದರ್ಭದಲ್ಲಿ ಶಿಕ್ಷಣದಲ್ಲಿ ಕ್ರಾಂತಿ ಮೂಡಿಸುವ ಕೆಲಸ ಮಾಡಿದ್ದೇನೆ, ಕೋಲಾರ ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ ಮತ್ತು ಸ್ವಚ್ಚತೆಗೆ ಆಧ್ಯತೆ ನೀಡಲಾಗುವುದು, ಕಳೆದೊಂದು ವಾರದಿಂದ ಜಿಲ್ಲೆಯ ಸಮಗ್ರ ಮಾಹಿತಿಯನ್ನು ಪಡೆದಿದ್ದೇನೆ, ಕಂದಾಯ ಸೇರಿದಂತೆ ಕೆಲವು ಇಲಾಖೆಗಳಿಗೆ ಭೇಟಿ ನೀಡಿದ್ದೇನೆ, ಅಧಿಕಾರಿಗಳಿಗೆ ಸಾರ್ವಜನಿಕರ ಸೇವೆ ಕಲ್ಪಿಸಲು ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ, ಸಿಬ್ಬಂದಿ ಒದಗಿಸಲು ಸರ್ಕಾರಕ್ಕೆ ಮನವಿಸಲ್ಲಿಸಲಾಗಿದೆ ಎಂದು ಹೇಳಿದರು.
ಒಂದು ಕಾಲದಲ್ಲಿ ಕೋಲಾರ ಜಿಲ್ಲೆ ಎಂದರೆ ಕೆಎಎಸ್, ಐಎಎಸ್‌ಗೆ ಹೆಸರುವಾಸಿ, ಆದರೆ ಇತ್ತೀಚೆಗೆ ಶಿಕ್ಷಣ ಕ್ಷೇತ್ರದಲ್ಲಿ ಹಿನ್ನಡೆಯಾಗುತ್ತಿದೆ, ಅದಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುವುದು, ಸರ್ಕಾರಿ ಶಾಲೆಗಳಿಗೆ ಆದ್ಯತೆ ನೀಡಲಾಗುವುದು ಹಾಗೂ ವಸತಿ ನಿಲಯಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಲಭ್ಯಗಳ ಬಗ್ಗೆ ಚಿಂತನೆ ನಡೆಸಲಾಗುವುದು, ಜಿಲ್ಲೆಯಲ್ಲಿ ಉದ್ಯೋಗ ಮೇಳ ನಡೆಸಿ ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸುವುದರ ಜೊತೆಗೆ ಕೈಗಾರಿಕೆಗಳ ಸಿಎಸ್‌ಆರ್ ನಿಧಿಯಿಂದ ಸರ್ಕಾರಿ ಶಾಲೆಗಳಿಗೆ ಸ್ಟಾಟ್ ಬೋರ್ಡ್, ಕಂಪ್ಯೂಟರ್ ಮುಂತಾದ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ನಗರಸಭೆಯಲ್ಲಿ ಶೇ.೭೦ರಷ್ಟು ಉದ್ಯೋಗಗಳು ಖಾಲಿಯಿದೆ, ಕಂದಾಯ ಇಲಾಖೆಯಲ್ಲಿ ೧೮ ಮಂದಿ ಶಿರಸ್ತೇದಾರರು, ೭೦ ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗಳು ಖಾಲಿಯಿದೆ, ಹೀಗೆ ಎಲ್ಲ ಇಲಾಖೆಗಳಲ್ಲಿಯೂ ಹುದ್ದೆಗಳು ಖಾಲಿ ಇವೆ, ಇದರ ಜೊತೆಗೆ ಅಧಿಕಾರಿಗಳು ಹೊರಗಿನಿಂದ ಬಂದು ಹೋಗುವವರೇ ಹೆಚ್ಚಾಗಿದ್ದಾರೆ, ಇಲಾಖೆಯಲ್ಲಿ ನೌಕರರು ಇಲ್ಲದೇ ಇದ್ದಲ್ಲಿ ಸಾರ್ವಜನಿಕರ ಕೆಲಸಗಳಿಗೆ ಹಿನ್ನಡೆಯಾಗುವುದು ಸಹಜ ಇದರಿಂದ ಅಭಿವೃದ್ಧಿಯೂ ಸಹ ಕುಂಠಿತವಾಗುತ್ತದೆ, ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳ ಪಟ್ಟಿ ತಯಾರಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ, ಹಂತಹಂತವಾಗಿ ಕೋಲಾರ ಜಿಲ್ಲೆಯನ್ನು ಒಂದು ವರ್ಷದೊಳಗಾಗಿ ಅಭಿವೃದ್ಧಿಪಥದತ್ತ ಕೊಂಡೊಯ್ಯುವ ಕೆಲಸವನ್ನು ಎಲ್ಲರ ಸಹಕಾರದಿಂದ ಮಾಡಲಾಗುವುದು ಎಂಬ ವಿಶ್ವಾಸ ವ್ಯಕ್ತಪಡೆಸಿದರು,