ಒಂದು ದೇಶ ಒಂದು ಪಡಿತರ ಸುಪ್ರೀಂ ಗಡುವು

ನವದೆಹಲಿ,ಜೂ.೨೯-ಮುಂದಿನ ತಿಂಗಳ ಜುಲೈ ಅಂತ್ಯದ ವೇಳೆಗೆ ’ಒಂದು ದೇಶ ಒಂದು ಪಡಿತರ’ ಕಾರ್ಡ್ ಯೋಜನೆಂiiನ್ನು ಅನುಷ್ಠಾನಗೊಳಿಸಬೇಕೆಂದು ಎಲ್ಲ ರಾಜ್ಯಗಳಿಗೆ ಸರ್ವೋಚ್ಛ ನ್ಯಾಯಾಲಯ ಇಂದು ನಿರ್ದೇಶನ ನೀಡಿದೆ.
ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂ.ಆರ್ ಶಾ ಅವರನ್ನೊಳಗೊಂಡ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
೨೦೨೦ರ ಮೇ ತಿಂಗಳಿನಲ್ಲಿ ಸರ್ವೋಚ್ಛ ನ್ಯಾಯಾಲಯ ದೇಶದಲ್ಲಿ ಲಾಕ್‌ಡೌನ್ ಜಾರಿಯಾದ ಸಂದರ್ಭದಲ್ಲಿ ವಲಸಿಗ
ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆ ಕುರಿತಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು.
ಈಗ ಮೇ ತಿಂಗಳಿನಲ್ಲಿ ಕಾಣಿಸಿಕೊಂಡಿದ್ದ ೨ನೇ ಅಲೆ ವೇಳೆ ವಲಸಿಗ ಕಾರ್ಮಿಕರು ಎದುರಿಸಿದ ಸಮಸ್ಯೆಗಳ ಬಗ್ಗೆಯೂ ಸುಪ್ರೀಂಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಕೊರೊನಾ ಸಂಕಷ್ಟದ ಸಮಯದಲ್ಲಿ ಸೋಂಕು ತಡೆಗೆ ಲಾಕ್‌ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳುವುದನ್ನು ತಪ್ಪಿಸಲು ಸುಪ್ರೀಂಕೋರ್ಟ್ ಈ ಮಹತ್ವದ ತೀರ್ಪು ಪ್ರಕಟಿಸಿದೆ.
ರಾಜ್ಯಗಳಲ್ಲಿರುವ ವಲಸಿಗರ ಬೇಡಿಕೆಗಳಿಗೆ ಅನುಗುಣವಾಗಿ ಕೇಂದ್ರ ಸರ್ಕಾರ ಆಹಾರಧಾನ್ಯಗಳನ್ನು ನಿಗದಿಪಡಿಸಬೇಕೆಂದು ನ್ಯಾಯಪೀಠ ಸೂಚಿಸಿದೆ.
ಸಾಂಕ್ರಾಮಿಕ ಪಿಡುಗು ಇರುವವರೆಗೆ ’ಒಂದು ದೇಶ ಒಂದು ಪಡಿತರ ಕಾರ್ಡ್’ ಯೋಜನೆಯನ್ನು ಕಾರ್ಯಗತ ಮಾಡಬೇಕು. ಜು. ೩೧ರೊಳಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಆಹಾರಧಾನ್ಯ ಒದಗಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಈ ಯೋಜನೆ ಜಾರಿಗೊಳಿಸುವಲ್ಲಿ ಯಾವುದೇ ಕಾರಣಕ್ಕೂ ರಾಜ್ಯಗಳು ವಿಳಂಬ ನೀತಿ ಅನುಸರಿಸಬಾರದು. ಎಲ್ಲ ರಾಜ್ಯ ಸ್ಥಾಪಕರು ಮತ್ತು ಗುತ್ತಿಗೆದಾರರನ್ನು ಅಂತರರಾಜ್ಯ ವಲಸೆ ಕಾರ್ಮಿಕರ (ಉದ್ಯೋಗ ನಿಯಂತ್ರಣ ಮತ್ತು ಸೇವಾ ನಿಯಮಗಳ ಕಾಯ್ದೆ) ೧೯೭೯ರಡಿಯಲ್ಲಿ ನೋಂದಾಯಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ಸಾಮಾನ್ಯ ರಾಷ್ಟ್ರೀಯ ದತ್ತಾಂಶ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯಗಳು ವಲಸಿಗರು ಮತ್ತು ಅಸಂಘಟಿತ ಕಾರ್ಮಿಕರ ಪೂರ್ಣಪ್ರಮಾಣದ ಹೆಸರುಗಳನ್ನು ನೋಂದಾಯಿಸಿಕೊಂಡು ಈ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು.
ವಲಸಿಗ ಕಾರ್ಮಿಕರಿಗಾಗಿಯೇ ರಾಜ್ಯಗಳು ಸಮುದಾಯ ಅಡುಗೆ ಮನೆಯನ್ನು ಆರಂಭಿಸುವಂತೆಯೂ ಸೂಚನೆ ನೀಡಿರುವ ನ್ಯಾಯಪೀಠ, ಈ ಸಮುದಾಯ ಅಡುಗೆ ಮನೆಗಳನ್ನು ಸಾಂಕ್ರಾಮಿಕ ರೋಗಗಳು ಅಂತ್ಯಗೊಳ್ಳುವವರೆಗೂ ಮುಂದುವರೆಸುವಂತೆ ತೀರ್ಪಿನಲ್ಲಿ ತಿಳಿಸಿದೆ.

’ಒಂದು ದೇಶ ಒಂದು ಪಡಿತರ ಕಾರ್ಡ್’ ಯೋಜನೆ ಜಾರಿಗೆ ಸುಪ್ರೀಂ ಆದೇಶ.

ಜು. ೩೧ರೊಳಗೆ ಯೋಜನೆ ಅನುಷ್ಠಾನಕ್ಕೆ ಸೂಚನೆ.

ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಸುಪ್ರೀಂ.

ಸಮುದಾಯ ಅಡುಗೆ ಮನೆ ಆರಂಭಕ್ಕೆ ನಿರ್ದೇಶನ.

ಎಲ್ಲ ರಾಜ್ಯಗಳಿಗೆ ಆಹಾರ ಪೂರೈಕೆಗೆ ಕೇಂದ್ರಕ್ಕೆ ಸೂಚನೆ.