ಒಂದು ದೇಶ ಒಂದು ಚುನಾವಣೆ: ಮೋದಿ ನಡೆ ಅನುಮಾನಾಸ್ಪದ

ಹುಬ್ಬಳ್ಳಿ, ಸೆ 3: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಒಂದು ದೇಶ ಒಂದು ಚುನಾವಣೆ ಮಾಡಲು ಪ್ರಧಾನಿ ಮೋದಿ ಅವರು ಹೊರಟ್ಟಿದ್ದು, ಇದರಲ್ಲಿ ಸಾಕಷ್ಟು ಅನುಮಾನಗಳಿವೆ ಎಂದು ರಾಜ್ಯ ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಲ್ಕು ವರ್ಷ ಸುಮ್ಮನಿದ್ದ ಕೇಂದ್ರ ಸರ್ಕಾರ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ನೇತೃತ್ವದಲ್ಲಿ ಸಮಿತಿ ಮಾಡಿದ್ದು, ಇದರ ಹಿಂದೆ ಕೇಂದ್ರ ಸರ್ಕಾರದ ಲೋಕಸಭಾ ಅವಧಿ ವಿಸ್ತಾರ ಮಾಡಿ ಚುನಾವಣೆ ಮುಂದೂಡುವ ದುರುದ್ದೇಶವಿದೆ ಎಂದರು.
ಪ್ರಧಾನಿ ಮೋದಿ ಅವರು ಸಂವಿಧಾನ ಬದಲಿಸಿ ಲೋಕಸಭಾ ಚುನಾವಣೆ ಮುಂದೂಡಿದರೆ ಜನರು ಸುಮ್ಮನಿರುವುದಿಲ್ಲ. ಸಮಿತಿಯಲ್ಲಿ ಸುಪ್ರೀಂ ಕೋಟ್9 ನ್ಯಾಯಾಧೀಶರನ್ನು ನೇಮಕ ಮಾಡಬೇಕಿತ್ತು. ಕೇಂದ್ರ ಸರ್ಕಾರದ ನಡೆಯಲ್ಲಿ ಸಾಕಷ್ಟು ಅನುಮಾನಗಳಿವೆ ಎಂದು ಹೇಳಿದರು.
ಕರ್ನಾಟಕದಲ್ಲಿನ ಚುನಾವಣೆ ಬಳಿಕ ಬಿಜೆಪಿ ವಿಶ್ವಾಸ ಕಳೆದುಕೊಂಡಿದೆ. ರಾಜ್ಯದಲ್ಲಿ ಅವರ ಪರಿಸ್ಥಿತಿ ಹದಗೆಡುತ್ತಿದೆ. ಕಾಂಗ್ರೆಸ್‍ನ ಐದು ಗ್ಯಾರಂಟಿಯ ಯಶಸ್ಸು ನೋಡಿ ಕೇಂದ್ರ ಸರ್ಕಾರ ಭಯದಲ್ಲಿ ಬೆಲೆ ಇಳಿಕೆ ಮಾಡುತ್ತಿದೆ ಎಂದರು.
ಮಹದಾಯಿ ಯೋಜನೆ ಅನುಷ್ಠಾನ ಕುರಿತಂತೆ ಅರಣ್ಯ ಇಲಾಖೆ ಅನುಮತಿ ಕೊಡಿಸಬೇಕು. ರಾಜ್ಯ ಸರ್ಕಾರ ಈ ಕುರಿತು ಕೇಂದ್ರ ಸರ್ಕಾರಕ್ಕೆ ಒತ್ತಡ ತರುತ್ತದೆ. ಬಿಜೆಪಿ ನುಡಿದಂತೆ ನಡೆಯಬೇಕು. ರಾಜ್ಯದ ಜನರ ಹಿತಕ್ಕಾಗಿ ಈ ಅನುಮತಿ ಕೊಡಿಸಬೇಕು ಎಂದು ಅವರು ಹೇಳಿದರು.