ಒಂದು ತಿಂಗಳು ಮತದಾರ ಪಟ್ಟಿ ಪರಿಶೀಲನೆಗೆ ಅವಕಾಶ

ಬೆಂಗಳೂರು, ನ.೮- ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಭಾಗವಾಗಿ ಇಂದಿನಿಂದ ಒಂದು ತಿಂಗಳ ಕಾಲ ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-೨೦೨೨ರ ಕಾರ್ಯಚಟುವಟಿಕೆಗಳ ಭಾಗವಾಗಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿರುವ ಕುರಿತು ರಾಜಕೀಯ ಪಕ್ಷಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಪರಿಷ್ಕೃತ ಮತದಾರರ ಕರಡು ಪ್ರತಿಯನ್ನು ಪಾಲಿಕೆಯ ಎಲ್ಲಾ ೨೮ ವಿಧಾನಸಭಾ ಕ್ಷೇತ್ರಗಳ ಮತದಾರರ ನೊಂದಣಾಧಿಕಾರಿಗಳ ಕಚೇರಿ, ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಚೇರಿ ಹಾಗೂ ವಾರ್ಡ್ ಕಚೇರಿಗಳಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರಿಗೆ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
ರಾಜಕೀಯ ಪಕ್ಷದ ಪ್ರತನಿಧಿಗಳು, ನಾಗರೀಕರು ಪರಿಷ್ಕೃತ ಮತದಾರರ ಕರಡು ಪ್ರತಿಯನ್ನು ಪರಿಶೀಲಿಸಿ ಏನಾದರು ತಿದ್ದುಪಡಿ ಅಥವಾ ಬದಲಾವಣೆ ಇದ್ದರೆ, ಸೇರ್ಪಡೆ ಮಾಡುವುದಿದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಾಲಿಕೆ ವಿಶೇಷ ಆಯುಕ್ತ (ಆಡಳಿತ) ದಯಾನಂದ್ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದಿನಿಂದಪರಿಷ್ಕೃತ ಮತದಾರರ ಕರಡು ಪ್ರತಿಯನ್ನು ಪ್ರಕಟಿಸಲಾಗಿದೆ.
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದಲ್ಲಿ, ತಪ್ಪಾಗಿದ್ದಲ್ಲಿ, ತಪ್ಪಾಗಿ ಸೇರ್ಪಡೆಗೊಂಡಿದ್ದಲ್ಲಿ ಹಾಗೂ ಒಂದು ಭಾಗ ಸಂಖ್ಯೆಯಿಂದ ಮತ್ತೊಂದು ಭಾಗದ ಸಂಖ್ಯೆಗೆ ವರ್ಗಾವಣೆಯಾಗಬೇಕಿದ್ದಲ್ಲಿ ಮತ್ತು ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಮತದಾರರು ಜಿಲ್ಲಾ ಚುನಾವಣಾಧಿಕಾರಿಗಳ ಅಥವಾ ಅಪರ ಜಿಲ್ಲಾ ಚುನಾವಣಾಧಿಕಾರಿಗಳ, ಮತದಾರರ ನೊಂದಣಾಧಿಕಾರಿಗಳ ಕಚೇರಿ, ಸಹಾಯಕ ನೊಂದಣಾಧಿಕಾರಿಗಳ ಕಚೇರಿ, ವಾರ್ಡ್ ಕಚೇರಿ.
ಅದೇ ರೀತಿ, ಬಿ.ಎಲ್.ಓ ರವರುಗಳಿಗೆ ನಮೂನೆ-೬, ೭, ೮ ಮತ್ತು ೮ಎ ರಲ್ಲಿ ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಡಿ.೮ ರವರಗೆ ಅವಕಾಶವನ್ನು ಕಲ್ಪಿಸಿರುತ್ತದೆ. ಇ ಅವಕಾಶದ ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದರು.
ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು www.ceokarnataka.kar.nic.in website ಮತ್ತು ಬಿಬಿಎಂಪಿ www.bbmp.gov.in website ನಲ್ಲಿ ಪರಿಶೀಲಿಸುವ ಮೂಲಕ ಖಾತರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು, ಮತದಾರರು ತಮ್ಮ ಮೊಬೈಲ್‌ನಲ್ಲಿ VHA(Voter Helpline App).
ಆಪ್ ಅಥವಾ NVSP (National Voters Service Portal) website ಮೂಲಕ ಖುದ್ದಾಗಿ ಮತದಾರರ ಮಾಹಿತಿಯನ್ನು ಖಾತರಿಪಡಿಸಿಕೊಳ್ಳಬಹುದು, e-EPIC Download ಮಾಡಿಕೊಳ್ಳಬಹುದು ಹಾಗೂ ಇನ್ನಿತರೇ ಮಾಹಿತಿಗಳಾದ ಮತಗಟ್ಟೆ, ಶೇಖಡವಾರು ಮತದಾನದ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದರು.