ಒಂದು ಕಡೆ ಆಕ್ಷೇಪಣೆ ಮತ್ತೊಂದಡೆ ಉದ್ಯೋಗ ಭರ್ತಿ ವಿಜಯನಗರ ಜಿಲ್ಲೆ ರಚನೆ ಅಂತಿಮ ನಿರ್ಧಾರಕ್ಕೆ ಸರ್ಕಾರ

ಬಳ್ಳಾರಿ ಡಿ.29 : ಜಿಲ್ಲೆಯನ್ನು ವಿಭಜನೆ ಮಾಡಿ ಸರ್ಕಾರ ವಿಜಯನಗರ ಜಿಲ್ಲೆ ರಚನೆ ಮಾಡಿದೆ. ಆದರೆ ಇದಕ್ಕೆ ಅಂತಿಮ ಮುದ್ರೆ ಒತ್ತಲು ಇನ್ನೂ ಆಕ್ಷೇಪಣೆಗಳನ್ನು ಕರೆದಿದೆ. ಅಲ್ಲದೆ ಜಿಲ್ಲೆ ವಿಭಜನೆ ವಿರೋಧಿಸಿ ಆಕ್ಷೇಪಣೆಗಳ ಸಲ್ಲಿಕೆ, ಪ್ರತಿಭಟನೆಗಳು ಮುಂದುವರೆದಿದ್ದರೂ. ಸರ್ಕಾರ ಮಾತ್ರ ಜಿಲ್ಲೆ ರಚನೆಗೆ ಅಂತಿಮ ನಿರ್ಧಾರಕ್ಕೆ ಬಂದತೆ ವಿಜಯನಗರ ಜಿಲ್ಲೆಗೆಂದು ಉದ್ಯೋಗಗಳ ಭರ್ತಿಗೆ ಮುಂದಾಗಿರುವುದು ಅಚ್ಚರಿ ತಂದಿದೆ.
ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯಿತಿಯಿಂದ ವಿಜಯನಗರ ಜಿಲ್ಲೆಗೆ ವಿವಿಧ ಯೋಜನೆಯಡಿ ಗುತ್ತಿಗೆ ಆಧಾರದ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಿಕೊಳ್ಳಲು ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿದ್ದು. ಇದರಲ್ಲಿ ವಿಜಯನಗರ ಜಿಲ್ಲೆಗೆಂದು ನಮೂದಿಸಿದೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲೆಯನ್ನು ವಿಭಜಿಸುವುದು ಬೇಡ ಅಖಂಡವಾಗಿಯೇ ಇರಲಿ ಎಂದು ಒಂದು ಕಡೆ ನಗರದಲ್ಲಿ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನಾ ಧರಣಿ ನಡೆಸುತ್ತಿವೆ. ಜನವರಿ 12 ವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ.
ನಗರಕ್ಕೆ ಡಿ.23 ರಂದು ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‍ಸಿಂಗ್ ಅವರು ಸಹ ಧರಣಿ ನಿರತರನ್ನು ಭೇಟಿ ಮಾಡಿದಾಗಲೂ ಜಿಲ್ಲೆ ವಿಭಜನೆಯ ವಿಷಯವನ್ನು ಕೈಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅಹವಾಲುಗಳನ್ನು ಆಲಿಸಿದ ಅವರು ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆಂದು ಹೇಳಿದ್ದಾರೆ.
ವಿರೋಧದ ನಡುವೆಯೂ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಸರ್ಕಾರದಲ್ಲಿನ ಅಧಿಕಾರಿಗಳು ಮಾತ್ರ ನಿರ್ಧರಿಸಿದಂತೆ. ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಡಿ.24 ರಂದು ಗ್ರಾಮೀಣ ಕುಡಿಯುತ ನೀರು ಮತ್ತು ನೈರ್ಮಲ್ಯ ಇಲಾಖೆ ಹೊರಡಿಸಿರುವ ಪ್ರಕಟಣೆಯಲ್ಲಿ `ವೇಕೆಂಟ್ ಡಿಸ್ಟ್ರಿಕ್ಟ್; ವಿಜಯನಗರ’ ಎಂತಲೇ ನಮೂದಿಸಿದೆ.
ಜಿಲ್ಲಾ ಪಂಚಾಯಿತಿ ಕಚೇರಿಯ ಸ್ವಚ್ಛಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಗುತ್ತಿಗೆ ಆಧಾರದಲ್ಲಿ ಮಾಹಿತಿ ಶಿಕ್ಷಣ ಹಾಗೂ ಸಂವಹನ ಸಮಾಲೋಚಕರು (ಐಇಸಿ), ನೈರ್ಮಲ್ಯ ಹಾಗೂ ಶುಚಿತ್ವ ಸಮಾಲೋಚಕರು (ಎಸ್‍ಎಚ್‍ಪಿ), ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಸಮಾಲೋಚಕರು (ಎಸ್‍ಎಲ್‍ಡಬ್ಲ್ಯುಎಂ), ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ ಸಮಾಲೋಚಕರು (ಎಂಐಎಸ್/ಎಂ&ಇ), ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‍ಆರ್‍ಡಿ) ಹುದ್ದೆಗಳಿಗೆ ಅನುಭವವುಳ್ಳ ಸಂಪನ್ಮೂಲ ವ್ಯಕ್ತಿಗಳನ್ನು ಒಂದು ವರ್ಷದ ಅವಧಿಗೆ ಮಾಸಿಕ 22 ಸಾವಿರ ರೂ.ಗಳ ವೇತನಕ್ಕೆ ನೇಮಕಾತಿ ಮಾಡಿಕೊಳ್ಳಲು ಜಿಲ್ಲಾ ಪಂಚಾಯಿತಿ ಪ್ರಕಟಣೆ ಹೊರಡಿಸಿದೆ.
ವಿಜಯನಗರದ ಜಿಲ್ಲಾ ಕೇಂದ್ರ ಹೊಸಪೇಟೆಯ ಜೋಳದರಾಶಿ ಗುಡ್ಡದಲ್ಲಿ ಶ್ರೀಕೃಷ್ಣದೇವರಾಯ ಬೃಹತ್ ಪುತ್ಥಳಿ ನಿರ್ಮಾಣ ಮತ್ತು ಮೂಲಸೌಲಭ್ಯ ಕಲ್ಪಿಸಲು ಸಚಿವ ಆನಂದ್‍ಸಿಂಗ್ ಭೂಮಿ ಪೂಜೆ ನೆರವೇರಿಸಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಬೇಕಾದ ಎಲ್ಲ ರೀತಿಯ ಸಿದ್ಧತೆಗಳು ಸರ್ಕಾರದ ಮಟ್ಟದಲ್ಲಿ ಮಾತ್ರ ಸದ್ದಿಲ್ಲದೇ ನಡೆಯುತ್ತಿದೆ. ಜಿಲ್ಲೆ ವಿಭಜನೆಗೆ ಎಷ್ಟೇ ವಿರೋಧ ವ್ಯಕ್ತವಾದರೂ ಸಹ ಪ್ರತ್ಯೇಕ ವಿಜಯನಗರ ಜಿಲ್ಲಾ ರಚನೆ ನಿಲ್ಲದು ಎಂಬಂತೆ ಸಚಿವ ಆನಂದ್ ಸಿಂಗ್ ನಿರ್ಧರಿಸಿದಂತೆ ಇದೆ.