
ಸಂಜೆ ವಾಣಿ ವಾರ್ತೆ
ಕೊಟ್ಟೂರು ಮೇ 05 : ಒಂದೇ ಒಂದು ಮಾರ್ಕ್ಸ ಎಷ್ಟು ಮುಖ್ಯ ಎಂಬುದು, ದ್ವಿತೀಯ ಪಿಯುಸಿಯಲ್ಲಿ (600ಕ್ಕೆ 592) ಫಸ್ಟ್ ರ್ಯಾಂಕ್ ಕಳೆದುಕೊಂಡ ಮೇಲೆ ಅರ್ಥವಾಯಿತು. ಇದರಿಂದ ನನಗೆ ಬಹಳ ನೋವಾಗಿದೆ ಎಂದು ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ತನ್ನದಾಗಿಸಿಕೊಂಡಿರುವ ದಡ್ಡಿ ಕರಿಬಸಮ್ಮ ಹೇಳಿದರು.
ತಾಲೂಕಿನ ಸುಟ್ಟಕೋಡಿಹಳ್ಳಿ ಗ್ರಾಮದಲ್ಲಿ ಗುರುವಾರ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಲ್ಲಿ ಯಾರೂ ದಡ್ಡರಲ್ಲ, ಓದುವ ಆಸಕ್ತಿ, ಛಲವೊಂದಿದ್ದರೆ ರ‍್ಯಾಂಕ್ ಬರಬಹುದು ಎನ್ನುವುದಕ್ಕೆ ನಾನೇ ಸಾಕ್ಷಿ, ಮನೆತನದ ಹೆಸರು ದಡ್ಡಿ, ಆದ್ದರಿಂದ ದಡ್ಡಿ, ದಡ್ಡಿ ಎನ್ನುತ್ತಿದ್ದರು,
ನಾನು ದಡ್ಡಿಯಲ್ಲ ಜಾಣೆ ಎಂಬುದನ್ನು ರ‍್ಯಾಂಕ್ ಬರುವ ಮೂಲಕ ನಿರೂಪಿಸಿದ್ದೇನೆ. ಕಾಲೇಜ್‌ಗೆ ಹತ್ತಿರವಾಗುತ್ತದೆ ಎಂಬ ಕಾರಣಕ್ಕೆ ತಾಯಿ ತವರು ಮನೆ ಸುಟ್ಟಕೋಡಿಹಳ್ಳಿಯಲ್ಲಿ ಓದಿದೆ. ಸ್ವಂತ ಊರು ಹರಾಳು, ಅಜ್ಜ, ಅಜ್ಜಿ ಊರು ಸುಟ್ಟಕೋಡಿಹಳ್ಳಿಗೂ ಕೀರ್ತಿ ತಂದಿರುವುದು ಹೆಮ್ಮೆ ಅನಿಸುತ್ತದೆ ಎಂದರು.
ಇಂದಿಗೂ ನನ್ನಲ್ಲಿ ಮೊಬೈಲ್ ಇಲ್ಲ. ಮನೆಯಲ್ಲಿ ಟಿ.ವಿ ಇಲ್ಲ. ಈ ಎರಡೂ ವಿದ್ಯಾರ್ಥಿಗಳ ಮನೋವಿಕಾಶಕ್ಕೆ ಮತ್ತು ಓದಲು ಅಡ್ಡಿಪಡಿಸುತ್ತವೆ. ಇವುಗಳಿಂದ ದೂರು ಇರಬೇಕು ಎಂದು ಸಲಹೆ ನೀಡಿದರು.
ನಮ್ಮ ತಂದೆ ನಾಗರಾಜ್, ತಾಯಿ ಹಾಲಮ್ಮ ಇಬ್ಬರೂ ಅನಕ್ಷರಸ್ಥರು, ಅವರಿಗೆ ಓದುವ ಅವಕಾಶವಿರಲಿಲ್ಲ. ಓದಿಲ್ಲ. ನಾವು ಅನಕ್ಷರಸ್ಥರಾದರೂ ಮಗಳು ಅನಕ್ಷರಸ್ಥರಾಗಬಾರದು ಎಂದು ಕೂಲಿ ಮಾಡಿ ಓದಿಸಿದರು ನಾನೀಗ ಅವರಿಗೆ ರ‍್ಯಾಂಕ್ ಬರುವ ಮೂಲಕ ಕೀರ್ತಿ ತಂದಿರುವೆ ಎಂದರು.
ಇಂಗ್ಲೀಷ್ ನನಗೆ ಸ್ವಲ್ಪ ಕಷ್ಟ ಆದ್ದರಿಂದ ಇಂಗ್ಲೀಷ್ ಮೇಜರ್ ಆಗಿ ತೆಗೆದುಕೊಂಡು ಐಎಎಸ್ ಮಾಡುವ ಆಸೆ ಇದೆ ಎಂದರು.
ವರ್ತಕ ಕರೆಗಾರ್ ರೇವಣ್ಣ, ವಕೀಲ ಸೋಮಲಿಂಗಪ್ಪ, ಮೂಗಪ್ಪ, ನಾಗರಾಜ್, ಹಾಲಮ್ಮ, ಉಜ್ಜಿನಿ ರುದ್ರಪ್ಪ ಮುಂತಾದವರಿದ್ದರು.