ಒಂದುವರೆ ವರ್ಷದ ನಂತರ ೧.೧೦ ಲಕ್ಷ ಮಕ್ಕಳು ಅಂಗನವಾಡಿಗೆ

ಜಿಲ್ಲೆಯಲ್ಲಿ ೨೬೬೨ ಅಂಗನವಾಡಿ ಕೇಂದ್ರ ಆರಂಭ

  • ರಾಯಚೂರು.ನ.೦೮- ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಜಿಲ್ಲೆಯ ಅಂಗನವಾಡಿ ಕೇಂದ್ರಗಳು ಒಂದುವರೆ ವರ್ಷದ ನಂತರ ಮತ್ತೇ ಈಗ ಆರಂಭಗೊಂಡಿವೆ.
    ಜಿಲ್ಲೆಯಲ್ಲಿ ಒಟ್ಟು ೨೬೬೨ ಅಂಗನವಾಡಿ ಕೇಂದ್ರಗಳಿವೆ. ೧.೧೦ ಲಕ್ಷ ಮಕ್ಕಳು ಈ ಅಂಗನವಾಡಿ ಕೇಂದ್ರಗಳಲ್ಲಿ ಪ್ರಾಥಮಿಕ ಪೂರ್ವ ಕಲಿಕೆ ಮತ್ತು ಪೌಷ್ಠಿಕ ಆಹಾರ ನೀಡುವ ವ್ಯವಸ್ಥೆ ಮಾಡಲಾಗಿತ್ತು. ೨೦೧೯ ರ ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಕೊರೊನಾ ನಿಯಂತ್ರಣದಲ್ಲಿರುವುದರಿಂದ ಎಲ್ಲೆಡೆ ಅಂಗನವಾಡಿ ಕೇಂದ್ರಗಳು ಆರಂಭಕ್ಕೆ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಇಂದಿನಿಂದ ಅಂಗನವಾಡಿ ಕೇಂದ್ರ ಆರಂಭಿಸಲಾಗಿದೆ.
    ಅಂಗನವಾಡಿ ಕೇಂದ್ರಗಳಲ್ಲಿ ಮೂರರಿಂದ ಆರು ವರ್ಷದ ಮಕ್ಕಳನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸುವ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳಿಗೆ ಅಗತ್ಯವಾದ ಕಲಿಕೆ ಮತ್ತು ಪೌಷ್ಟಿಕ ಆಹಾರ ನೀಡುವುದಕ್ಕೆ ಸಂಬಂಧಿಸಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಧಿಕಾರಿಗಳು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿ ಮಕ್ಕಳನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಸಿಹಿ ಪಾಯಾಸ ನೀಡಲಾಯಿತು. ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ನಿರ್ದಿಷ್ಟ ನಿಗದಿತ ಸಂಖ್ಯೆಯ ಮಕ್ಕಳು ಹಾಜರಾಗುವಂತೆ ಎಚ್ಚರವಹಿಸುವ ಸೂಚನೆ ನೀಡಲಾಗಿತ್ತು.
    ಮಕ್ಕಳು ಇಲ್ಲದೇ ಬಿಕೋ ಎನ್ನುತ್ತಿದ್ದ ಅಂಗನವಾಡಿ ಕೇಂದ್ರಗಳು ಈಗ ಮತ್ತೇ ಮಕ್ಕಳ ಓಡಾಟದಿಂದ ಹೊಸಕಳೆ ತುಂಬಿಕೊಳ್ಳುವಂತೆ ಮಾಡಿದೆ. ಅಂಗನವಾಡಿ ಕಾರ್ಯಕರ್ತರು ಮತ್ತು ಆಯಾಗಳು ನಿನ್ನೆಯಿಂದಲೇ ಅಂಗನವಾಡಿ ಕೇಂದ್ರಗಳ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದರು.