ಒಂದಾಗಿದ್ದು ಗೆಲುವಿಗೆ ಸಹಕಾರಿಯಾಯ್ತಾ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.14: ಆ ಗಾಲಿ ರೆಡ್ಡಿ ಸಹೋದರರು ಪ್ರತಿ ಸ್ಪರ್ಧಿಗಳಾಗಿ ಸೋಲುಂಡರೆ ಈ ನಾರಾ ರೆಡ್ಡಿ ಸಹೋದರರು ಒಂದಾಗಿ ಗೆಲುವು ಕಂಡರು ಎನ್ನಬಹದು.
ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ತಿ ನಾರಾ ಭರತ್ ರೆಡ್ಡಿ ಅವರ ಗೆಲುವಿಗೆ ಹತ್ತಾರು ಕಾರಣಗಳಿರಬಹುದು. ಅದರಲ್ಲಿ ಅವರ ಚಿಕ್ಕಪ್ಪ ನಾರಾ ಪ್ರತಾಪ್ ರೆಡ್ಡಿ ಅವರು ಭರತ್ ರೆಡ್ಡಿ ಜೊತೆ ಚುನಾವಣೆ ಸಂದರ್ಭದಲ್ಲಿ ಸೇರಿದ್ದು ಒಂದು ಕಾರಣ ಎನ್ನಬಹದು.
ಮೊದಲಿನಿಂದಲೂ ರಾಜಕೀಯವಾಗಿ ನಾರಾ ಸೂರ್ಯನಾರಾಯಣ ರೆಡ್ಡಿ ಮತ್ತು ಪ್ರತಾಪ್ ರೆಡ್ಡಿ ಬದ್ದ ವೈರಿಗಳಂತೆ ಬೆಳೆದು ಬಂದವರು. ಒಬ್ಬೊಬ್ಬರು ಒಂದು ಪಕ್ಷದಲ್ಲಿ ಇರುತ್ತಿದ್ದರು. ಅಣ್ಣ ಈ ಪಕ್ಷಕ್ಕೆ ಬಂದರೆ ತಮ್ಮ ಆ ಪಕ್ಷಕ್ಕೆ ಜಂಪ್ ಆಗುತ್ತಿದ್ದರು. ಇಬ್ಬರೂ ಒಂದೇ ಕಡೆ ಇರುತ್ತಿರಲಿಲ್ಲ. ಬೇರೆ ಬೇರೆ ಕಡೆ ಇದ್ದಾಗಲೆಲ್ಲ ಇಬ್ಬರಿಗೂ ಚುನಾವಣೆಯಲ್ಲಿ ಗೆಲುವು ದೊರೆತಿರಲಿಲ್ಲ‌. ಆದರೆ 2004 ರಲ್ಲಿ ಜೆಡಿಎಸ್ ನಲ್ಲಿ ಒಂದಾಗಿ ಚುನಾವಣೆ ಎದುರಿಸಿದ್ದರಿಂದ ಕುರುಗೋಡು ಕ್ಷೇತ್ರದ ಶಾಸಕರಾಗಿ ನಾರಾಯಣ ರೆಡ್ಡಿ ಆಯ್ಕೆಯಾಗಿದ್ದರು.
ನಂತರ ಮತ್ತೆ ದೂರ, ದೂರ ಆಗಿದ್ದರು. ಕಳೆದ ವಿಧಾನ ಪರಿಷತ್ತಿನ ಪದವೀಧರ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಸಹೋದರರು ಶತ್ರುಗಳಂತೆಯೇ ಚುನಾವಣೆ ಎದುರಿಸಿದ್ದರು. ಆಗಲೂ ನಾರಾಯಣ ರೆಡ್ಡಿ ಅವರು ಸಹೋದರ ಪ್ರತಾಪ್ ರೆಡ್ಡಿ ಅವರನ್ನು ಬೆಂಬಲಿಸಿದ್ದರೆ ಗೆಲಿವಿನ ಸಾಧ್ಯತೆ ಇತ್ತೇನೋ ಆದರೆ ಅದು ಆಗಲಿಲ್ಲ.
ಆದರೆ ಈ ಚುನಾವಣೆಯಲ್ಲಿ ಮಕ್ಕಳು ಚಿಕ್ಕಪ್ಪ ಪ್ರತಾಪ್ ರೆಡ್ಡಿ ಅವರನ್ನು ತಮ್ಮೊಡನೆ ಕರೆದುಕೊಂಡು.  ಸಹೋದರರು ಒಂದಾಗಿದ್ದಾರೆಂದು  ಚುನಾವಣೆ ಪ್ರಚಾರ ನಡೆಸಿ ಗೆಲಯವು ಕಂಡಿದ್ದಾರೆ.
ಇದು ಕಾಕಾತಾಳೀಯ ಎಂಬಂತೆ ಇಬ್ಬರು ಸಹೋದರರು ಒಂದಾದಾಗ ಗೆಲುವು ಖಚಿತ ಎಂಬುದನ್ನು ಸಾಬೀತು ಪಡಿಸಿದಂತಾಗಿದೆ.