ಒಂದನೇ ವಾರ್ಡು ಚುನಾಚಣೆ ರದ್ದಿಗೆ ಡಿಎಸ್ ಎಸ್ ಜಿಲ್ಲಾಡಳಿತಕ್ಕೆ ಮನವಿ

ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅನುಸೂಚಿತ ಜಾತಿಗೆ ಮೀಸಲಾಗಿದ್ದ 1ನೇ ವಾರ್ಡ್ ನಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬೇಡ ಜಂಗಮ ಜನಾಂಗದ ಎಚ್.ಎಂ.ಕಿರಣ್ ಕುಮಾರ್ ಅವರ ಜಾತಿ ಪ್ರಮಾಣ ಪತ್ರದ ಬಗ್ಗೆ ತನಿಖೆಯಾಗಬೇಕು ಅಲ್ಲಿಯ ವರಗೆ ಆ ವಾರ್ಡಿನ‌ ಚುನಾವಣೆ ಪ್ರಕ್ರಿಯೆ ತಡೆಯಬೇಕೆಂದು ಅಂಬೇಡ್ಕರ್ ವಾದದ ದಲಿತ ಸಂಘರ್ಷ ಸಮಿತಿಯ ಮುಖಂಡರು ಇಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ನಿನ್ನೆ ನಡೆದ ನಾಮಪತ್ರ. ಮರು ಪರಿಶೀಲನೆ ವೇಳೆ ಇತರೆ ಪಕ್ಷದ ಅಭ್ಯರ್ಥಿಯೊಬ್ಬರು ಆಕ್ಷೇಪಣೆ ಸಲ್ಲಿಸಿದರೂ ಅಲ್ಲಿನ ಚುನಾವಣಾಧಿಕಾರಿಗಳು ಸ್ವತಂತ್ರ ಅಭ್ಯರ್ಥಿ ಎಚ್.ಎಂ.ಕಿರಣ್ ಕುಮಾರ್ ಅವರ ನಾಮಪತ್ರವನ್ನು ಊರ್ಜಿತಗೊಳಿಸಿ, ನಾಮಪತ್ರ ಸ್ವೀಕೃತವಾದ ಆಭ್ಯರ್ಥಿಗಳ ಪಟ್ಟಿಯನ್ನೂ ಕಚೇರಿಯಲ್ಲಿ ಪ್ರಕಟಿಸಿದ್ದಾರೆ.
ಕಿರಣ್ ಕುಮಾರ್ ಅವರು ವೀರಶೈವ ಸಮುದಾಯದ ಪಂಚಪೀಠಗಳ ಪರಂಪರೆ ಹೊಂದಿರುವ ಜಂಗಮ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚುನಾಯಿತಗೊಂಡಿದ್ದಾರೆ. ಅಲ್ಲದೇ ಕಳೆದ 2013 ರಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಅಂದು ಸಾಮಾನ್ಯಕ್ಕೆ ಮೀಸಲಾಗಿದ್ದ 20ನೇ ವಾರ್ಡ್ ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ‌ ಪರಾಭವಗೊಂಡಿದ್ದಾರೆ. ಬೇಡ ಜಂಗಮ ಪರಿಶಿಷ್ಟ ಜಾತಿ ಯಾಗಿದ್ದರೆ ಇವರು 2013 ರಲ್ಲೇ ಏಕೆ ಅನುಸೂಚಿತ ಜಾತಿ ಮೀಸಲು ವಾರ್ಡ್ ನಿಂದ ಸ್ಪರ್ಧಿಸಿಲ್ಲ ಎಂಬ ಅನುಮಾನ ಮೂಡುತ್ತಿದೆ. ಅಲ್ಲದೇ ಬಳ್ಳಾರಿ ಜಿಲ್ಲೆಯಲ್ಲಿ ಈವರೆಗೂ ಬೇಡ ಜಂಗಮ ಜಾತಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿಲ್ಲ ಎಂಬ ಮಾಹಿತಿ ಇದೆ. ಆದರೆ, ಅವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಹೇಗೆ ಲಭಿಸಿತು, ಎಲ್ಲಿಂದ ತಂದಿದ್ದಾರೆ ಎಂಬುದನ್ನು ಪರಿಶೀಲಿಸಬೇಕಾಗಿದೆ. ಹಾಗಾಗಿ ಬಳ್ಳಾರಿ ಪಾಲಿಕೆಯ ಅನುಸೂಚಿತ ಜಾತಿಗೆ ಮೀಸಲಾದ 1ನೇ ವಾರ್ಡ್ ನ ಸ್ವತಂತ್ರ ಅಭ್ಯರ್ಥಿ ಕಿರಣ್ ಕುಮಾರ್ ಅವರು ನಾಮಪತ್ರದೊಂದಿಗೆ ಸಲ್ಲಿಸಿರುವ ಜಾತಿ ಪ್ರಮಾಣ ಪತ್ರವನ್ನು ಮರು ಪರಿಶೀಲಿಸಬೇಕು.ತನಿಖೆಯಾಗಬೇಕು. ಈ ಬಗ್ಗೆ ವಾಸ್ತವಾಂಶ ಪತ್ತೆಯಾಗುವವರೆಗೂ 1ನೇ ವಾರ್ಡ್ ನ ಚುನಾವಣೆಯನ್ನು ತಡೆಹಿಡಿಯಬೇಕು ಎಂದು ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರುಗಳಾದ ವೆಂಕಟೇಶ್ ಹೆಗಡೆ, ಹುಸೇನಪ್ಪ, ದುರುಗಪ್ಪ ತಳವಾರ, ಪಿ.ತಾಯಪ್ಪ,ಎ.ಕೆ.ಗಂಗಾಧರ, ಎ.ಈಶ್ವರಪ್ಪ, ಸಿ.ಸೋಮಶೇಖರ, ಚಿಕ್ಕಗಾದಲಿಂಗಪ್ಪ, ಹೆಚ್.ಕುಮಾರಸ್ವಾಮಿ, ಎಲ್.ಮಾರೆಣ್ಣ, ಎರುಕಲ ಸ್ವಾಮಿ, ಹೆಚ್.ಈರಪ್ಪ ಮೊದಲಾದವರು ಇದ್ದರು.