ಒಂಟಿ ಕಾಲಿನಲ್ಲಿ ದೋಸೆ ಮಾರುವ ಯುವತಿ: ವಿವಿಎಸ್ ಲಕ್ಷ್ಣಣ್ ಮೆಚ್ಚುಗೆ

ಬೆಂಗಳೂರು.,ಮೇ.೨೪- ಒಂಟಿ ಕಾಲಿನಲ್ಲಿ ದೋಸೆ ಮಾರುವ ಯುವತಿ ಬಗ್ಗೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜೀವನದಲ್ಲಿ ಸಾಧಿಸುವ ಛಲ ಇದ್ದರೆ ಎಂತಹ ಕಷ್ಟ ಬಂದರೂ ಅದನ್ನು ಎದುರಿಸಿ ನಿಲ್ಲಬಹುದು. ಇಲ್ಲೊಬ್ಬ ಯುವತಿ ಅಂಗವೈಕಲ್ಯ ದೇಹಕ್ಕೆ ಹೊರತು ಮನಸ್ಸಿಗಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ದುಡಿಯಬೇಕೆನ್ನುವ ಹುಮ್ಮಸ್ಸಿನಲ್ಲಿ ಹೋಟೆಲ್ ಉದ್ಯಮಕ್ಕೆ ಇಳಿದು ಯಶಸ್ವಿಯಾಗಿ ಉದ್ಯಮ ನಡೆಸಿ ಕ್ರಿಕೆಟ್ ದಿಗ್ಗಜ ವಿವಿಎಸ್ ಲಕ್ಷ್ಮಣ್ ಅವರ ಗಮನ ಸೆಳೆದಿದ್ದಾರೆ ವೀಣಾ ಅಂಬರೀಶ್.
ಬೆಂಗಳೂರಿನ ಕರಿ ದೋಸಾ ಹೋಟೆಲ್‌ನ ಮಾಲೀಕರಾಗಿರುವ ವೀಣಾ ಅಂಬರೀಶ್ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.
ಭರತನಾಟ್ಯ ಕಲಾವಿದೆಯಾಗಿದ್ದ ವೀಣಾ ೧೭ನೇ ವಯಸ್ಸಿನಲ್ಲಿ ಬಸ್ ಅಪಘಾತವೊಂದರಲ್ಲಿ ಬಲಗಾಲನ್ನು ಕಳೆದುಕೊಂಡರು.
ಈ ಸಂದರ್ಭದಲ್ಲಿ ವೀಣಾ ಆತ್ಮಹತ್ಯೆಗೂ ಯತ್ನಿಸಿದ್ದರು. ನಂತರ ಬದುಕುವ ದೃಢ ನಿರ್ಧಾರವನ್ನು ಮಾಡಿ ಎಂಬಿಎ ಓದಿ ಐಟಿ ಕಂಪೆನಿಯಲ್ಲಿ ಕೆಲಸ ಪಡೆದರು. ಆದರೆ ಕುಳಿತಲ್ಲೇ ಹೆಚ್ಚು ಹೊತ್ತು ಕೆಲಸ ಮಾಡಲು ಸಾಧ್ಯವಾಗದ ಕಾರಣ ವೀಣಾ ಕೆಲಸ ಬಿಟ್ಟರು.
ವೀಣಾ ಅಡುಗೆ ಮಾಡುವುದರಲ್ಲಿ ಹೆಚ್ಚು ಆಸಕ್ತಿ ಇದ್ದಿದ್ದರಿಂದ ಕರಿ ದೋಸಾ ಹೋಟೆಲ್ ಆರಂಭಿಸಿ ಯಶಸ್ಸು ಕಂಡರು.
ವೀಣಾ ಅಂಬರೀಶ್ ಅವರ ಸ್ಫೂರ್ತಿದಾಯಕ ಘಟನೆಯನ್ನು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ತಮ್ಮ ಎಕ್ಸ್ ಖಾತೆಯಲ್ಲಿ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಧೃತಿಗೆಡದೇ ಗಟ್ಟಿಯಾಗಿ ನಿಲ್ಲಬೇಕು ಎಂಬ ವೀಣಾ ನಿಲುವು ನಮ್ಮೆಲ್ಲರಿಗೂ ಸ್ಫೂರ್ತಿ ಎಂದು ಶೀರ್ಷಿಕೆ ನೀಡಿದ್ದಾರೆ.
ಈ ಪೋಸ್ಟ್ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದು ನೆಟ್ಟಿಗರಿಂದ ಮೆಚ್ಚುಗೆ ಪಡೆದಿದೆ.