ಐ ಟಿ, ಈ ಡಿ, ಸಿಬಿಐ ಬಳಸಿ ಶಟ್ಟರ್ ಗೆ ಕರೆದೊಯ್ದಿದ್ದಾರೆ: ಈಶ್ವರ್ ಖಂಡ್ರೆ ಆರೋಪ

ಬೀದರ್:ಜ.27: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಬಿಜೆಪಿಯಲ್ಲಿ ಎಷ್ಟು ಹಿಂಸೆ, ಅವಮಾನ ಅನುಭವಿಸಿದ್ದಾರೆ. ಬಿಜೆಪಿಯಿಂದ ಹೊರಗೆ ಬಂದ ನಂತರ ಅವರು ಯಾವ ರೀತಿಯ ಹೇಳಿಕೆ ಕೊಟ್ಟಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ’ ಎಂದು ಪರಿಸರ, ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಸ್ವಾಯತ್ತ ಸಂಸ್ಥೆಗಳಾದ ಇಡಿ, ಐ.ಟಿ., ಸಿಬಿಐ ದುರ್ಬಳಕೆ ಮಾಡಿಕೊಂಡು ಎಲ್ಲರನ್ನು ಹೆದರಿಸಿ ಅನೇಕ ಹಿರಿಯ ಮುಖಂಡರಿಗೆ ಬಿಜೆಪಿಯವರು ಗಾಳ ಹಾಕುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಜಗದೀಶ ಶೆಟ್ಟರ್ ಅವರು ಮರಳಿ ಬಿಜೆಪಿಗೆ ಏಕೆ ಹೋಗಿದ್ದಾರೆ ಎನ್ನುವುದನ್ನು ಮಾಧ್ಯಮವರು ಅವರನ್ನೇ ಪ್ರಶ್ನಿಸಿ ಎಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕೇಳಿದರು.

ಕಾಂಗ್ರೆಸ್‍ಗೆ ಬರುವವರು ಬಹಳ ಜನ ಇದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಹುಟ್ಟಿಕೊಂಡಿರುವ ಪಕ್ಷವಲ್ಲ. ಕಾಂಗ್ರೆಸ್ ಪಕ್ಷ ಆಂದೋಲನ. ಅದು ಜನರ ಒಳಿತಿಗಾಗಿ ಇರುವ ಪಕ್ಷ. ಎಲ್ಲರನ್ನೂ ಒಳಗೊಂಡಂತೆ ಈ ರಾಷ್ಟ್ರದ ಅಭಿವೃದ್ಧಿ ಮಾಡಬೇಕೆನ್ನುವುದು ನಮ್ಮ ಗುರಿ.

ಭಾರತ ಬಹುತ್ವದ ರಾಷ್ಟ್ರ. ಎಲ್ಲ ಜಾತಿ, ಜನಾಂಗದವರಿಗೆ ಸಮಾನ ಅವಕಾಶಗಳಿವೆ. ಪ್ರಜಾಪ್ರಭುತ್ವದಲ್ಲಿ ಜನ ನಂಬಿಕೆ ಇಟ್ಟುಕೊಂಡು ಇದ್ದಾರೆ. ಸುಮ್ಮನೆ ಹೇಳಿಕೆ ಕೊಡಬಾರದು. ಕೇಂದ್ರ ಸರ್ಕಾರ ಜನರಿಗೆ ಮರಳು ಮಾಡುವುದು ಮೊದಲು ಬಿಡಬೇಕು ಎಂದರು.

ನಯಾ ಪೈಸೆ ಬರ ಪರಿಹಾರ ಬಂದಿಲ್ಲ

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಇದುವರೆಗೆ ನಯಾ ಪೈಸೆ ಬರ ಪರಿಹಾರ ಬಂದಿಲ್ಲ. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ಅವರನ್ನು ಭೇಟಿ ಮಾಡಿ ಕೋರಿದರೂ ಅನುದಾನ ಕೊಟ್ಟಿಲ್ಲ. ?4 ಲಕ್ಷ ಕೋಟಿ ರಾಜ್ಯದಿಂದ ತೆರಿಗೆ ಹಣ ಹೋಗಿದೆ. ಹೀಗಿದ್ದಾಗಲೂ ಪರಿಹಾರ ಕೊಡದಿದ್ದರೆ ಹೇಗೆ? 15ನೇ ಹಣಕಾಸು ಯೋಜನೆಯಡಿಯಲ್ಲಿ ಕೇಂದ್ರದಿಂದ ಕಡಿಮೆ ಅನುದಾನ ಬಂದಿದೆ ಎಂದು ಖಂಡ್ರೆ ಆರೋಪಿಸಿದರು.