ಐ.ಇ.ಸಿ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ಸೂಚನೆ

ಚಾಮರಾಜನಗರ, ನ.24:- ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಐಇಸಿ (ಮಾಹಿತಿ, ಶಿಕ್ಷಣ, ಸಮನ್ವಯ) ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಗ್ರಾಮೀಣಾಭಿವೃದ್ದಿ ಆಯುಕ್ತರಾದ ಶಿಲ್ಪಾನಾಗ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿಂದು ನರೇಗಾ ಯೋಜನೆಯಡಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಪ್ರಮುಖ ಇಲಾಖೆಗಳಾದ ಕೃಷಿ, ತೋಟಗಾರಿಕೆ, ಸಾಮಾಜಿಕ ಅರಣ್ಯ ಹಾಗೂ ರೇಷ್ಮೆ ಇಲಾಖೆಗಳು ತ್ವರಿತಗತಿಯಲ್ಲಿ ಕಾರ್ಯಕ್ರಮ, ಕಾಮಗಾರಿಗಳನ್ನು ಜಾರಿ ಮಾಡಿ ನಿಗದಿತ ಗುರಿ ಸಾಧಿಸಬೇಕು. ಆಯಾ ಕಾರ್ಯಕ್ರಮಗಳ ಪ್ರಗತಿ ಕುರಿತು ಕಾಲ ಕಾಲಕ್ಕೆ ವರದಿ ಸಲ್ಲಿಸಬೇಕು ಎಂದರು.
ನರೇಗಾ ಯೋಜನೆಯಡಿ ಕಾರ್ಯಕ್ರಮಗಳನ್ನು ಬೇಡಿಕೆಗೆ ತಕ್ಕಂತೆ ನಿರ್ವಹಿಸಲು ತುಂಬಾ ಅವಕಾಶಗಳಿದೆ. ಸಂಬಂಧ ಪಟ್ಟ ಇಲಾಖೆಗಳು ಅವಶ್ಯ ಕಾರ್ಯ ಯೋಜನೆ ರೂಪಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ರೈತರಿಗೆ ಅಗತ್ಯ ಸೌಲಭ್ಯ ಸವಲತ್ತುಗಳನ್ನು ತಲುಪಿಸಬೇಕು. ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಆಯಾ ತಾಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿಗಳು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಕಾರ್ಯಕ್ರಮ ಅನುಷ್ಠಾನ ವಿವರವನ್ನು ಪರಿಶೀಲಿಸಬೇಕು ಎಂದು ಆಯುಕ್ತರು ನಿರ್ದೇಶನ ನೀಡಿದರು.
ಪ್ರತೀ ಕುಟುಂಬಕ್ಕೂ ಜಾಬ್ ಕಾರ್ಡ್ ನೀಡಿ 100 ದಿನಗಳ ಉದ್ಯೋಗ ನೀಡಬೇಕು. ಎಲ್ಲಾ ತಾಲೂಕುಗಳಲ್ಲಿಯೂ ಕಾರ್ಮಿಕರಿಗೆ ನೀಡುವ ನೂರು ದಿನಗಳ ಉದ್ಯೋಗ ಪೂರ್ಣಗೊಳ್ಳುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. 50 ರಿಂದ 100 ದಿನಗಳ ಉದ್ಯೋಗ ಪೂರೈಸಿದ ಮಹಿಳೆಯರಿಗೆ ಎರಡು ಜೊತೆ ಶರ್ಟ್ ಹಾಗೂ ಕ್ಯಾಪ್‍ಗಳನ್ನು ನೀಡಬೇಕು. ತಾಂತ್ರಿಕ ಕಾರಣಗಳನ್ನು ನೀಡಿ ಕಾರ್ಮಿಕರಿಗೆ ವೇತನ ಪಾವತಿಸುವಲ್ಲಿ ಯಾವುದೇ ವಿಳಂಬ ಮಾಡಬಾರದು ಎಂದು ಆಯುಕ್ತರು ತಿಳಿಸಿದರು.
ಕೃಷಿ ಇಲಾಖೆಯಿಂದ ಕೃಷಿ ಹೊಂಡ, ಬದು ನಿರ್ಮಾಣ, ಚೆಕ್ ಡ್ಯಾಂ ನಿರ್ಮಾಣ, ತೋಟಗಾರಿಕೆ ಇಲಾಖೆಯಿಂದ ಶಾಲೆಗಳಲ್ಲಿ ಕೈತೋಟ ನಿರ್ಮಾಣ, ಕಿಚನ್ ಗಾರ್ಡನ್, ಅರಣ್ಯ ಇಲಾಖೆಯಿಂದ ನರ್ಸರಿ ಫ್ಲಾಂಟ್‍ಗಳ ನಿರ್ಮಾಣ, ಕಾಂಪೌಂಡ್ ಇಲ್ಲದ ಶಾಲೆಗಳಲ್ಲಿ ಬಯೋ ಫೆನ್ಸಿಂಗ್ ಅಳವಡಿಕೆಗೆ ಹೆಚ್ಚು ಒತ್ತು ನೀಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಸಂಗ್ರಹ, ವಸೂಲಾತಿಯಲ್ಲಿ ಹೆಚ್ಚಿನ ಪ್ರÀಗತಿ ಸಾಧಿಸಬೇಕು ಎಂದು ಸೂಚಿಸಿದರು.
ಲಸಿಕಾಕರಣ ಕಾರ್ಯಕ್ರಮವನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕಾಗಿರುವ ನಿಟ್ಟಿನಲ್ಲಿ ಮೊದಲ ಹಾಗೂ ಎರಡನೇ ಡೋಸ್ ನೀಡಿಕೆಯಲ್ಲಿ ನರೇಗಾ ಕೆಲಸಗಾರರನ್ನು ಪರಿಗಣಿಸಿ ಆದ್ಯತೆ ನೀಡಬೇಕು. ಲಸಿಕೋತ್ಸವದಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಕೋವಿಡ್ ಲಸಿಕೆಯಿಂದ ಯಾರೂ ಸಹ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ನರೇಗಾ ಕಾರ್ಯಕ್ರಮಗಳ ಸಮನ್ವಯಕ್ಕಾಗಿ ಸಂಬಂಧಪಟ್ಟ ಕ್ಷೇತ್ರ ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ ಮೊಬೈಲ್ ಆಪ್ ನಲ್ಲಿ ಅಳವಡಿಸಬೇಕು. ಐಇಸಿ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಸೋಶಿಯಲ್ ಮೀಡಿಯಾ ಬಳಸಿಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಆಯುಕ್ತರಾದ ಶಿಲ್ಪಾನಾಗ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ, ನರೇಗಾ ಯೋಜನೆಯ ಜಂಟಿ ನಿರ್ದೆಶಕರಾದ ದಿಡ್ಡಿಮನಿ, ಸಹಾಯಕ ನಿರ್ದೆಶಕರಾದ ಜಗದೀಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಕಲಾ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಶಿವವಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೆಶಕರಾದ ಗೀತಾಲಕ್ಷ್ಮಿ, ಸಾಮಾಜಿಕ ಅರಣ್ಯ ವಿಭಾಗದ ರಾಜು ಸಭೆಯಲ್ಲಿ ಹಾಜರಿದ್ದರು.
ಇದಕ್ಕೂ ಮೊದಲು ಮಂಗಲ ಗ್ರಾಮ ಪಂಚಾಯಿತಿಯ ಯಡಿಯೂರು ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಾಣವಾಗುತ್ತಿರುವ ಅಂಗನವಾಡಿ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ನಾಗವಳ್ಳಿ ಗ್ರಾಮದಲ್ಲಿರುವ ಗ್ರಂಥಾಲಯಕ್ಕೆ ಭೇಟಿ ನೀಡಿ ಅಲ್ಲಿನ ಗ್ರಂಥಾಲಯವನ್ನು ನರೇಗಾ ಯೋಜನೆಯಡಿ ಉನ್ನತೀಕರಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ನಗರದಲ್ಲಿ ನಡೆದ ಪರಿಶೀಲನಾ ಸಭೆಯ ಬಳಿಕ ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಹಾಡಿಗೆ ಭೇಟಿ ನೀಡಿ ಕಾಫಿ ಸಸಿ ನೆಡುವ ಕಾಮಗಾರಿ, ಸೋಕ್ ಫಿಟ್ ಹಾಗೂ ನರ್ಸರಿಗಳನ್ನು ವೀಕ್ಷಿಸಿದರು.