ಐಸ್ ಕ್ರೀಮ್ ಕಂಟೇನರ್ ಪಲ್ಟಿ; ಚಾಲಕ ಕ್ಲೀನರ್ ಇಬ್ಬರು ಸಾವು

ಬೆಂಗಳೂರು,ಜೂ.೨೮-ಐಸ್ ಕ್ರೀಮ್ ಕಂಟೇನರ್ ಪಲ್ಟಿ ಹೊಡೆದ ಪರಿಣಾಮ ಕಂಟೇನರ್ ಚಾಲಕ ಹಾಗೂ ಕ್ಲೀನರ್ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆ ವೃತ್ತದಲ್ಲಿ ನಡೆದಿದೆ. ಕಂಟೇನರ್ ವೇಗವಾಗಿ ಬೊಮ್ಮಸಂದ್ರದಿಂದ ಹೊಸಕೋಟೆಗೆ ಹೋಗುತ್ತಿತ್ತು. ಈ ಸಮಯದಲ್ಲಿ ಕಂಟೇನರ್ ಹೆದ್ದಾರಿಯ ಬ್ಯಾರಿಕೇಡ್‌ಗೆ ಗುದ್ದಿ, ಬಳಿಕ ಪಲ್ಟಿಯಾಗಿ ಬಿದ್ದಿದೆ. ಈ ವೇಳೆ ಬ್ಯಾರಿಕೇಡ್ ಕಂಬಿಗಳು ಚುಚ್ಚಿ ಡ್ರೈವರ್ ಹಾಗೂ ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಚಾಲಕ ಹಾಗೂ ಕ್ಲೀನರ್ ತಮಿಳುನಾಡು ಮೂಲದವರು ಎನ್ನಲಾಗಿದೆ.ಸುದ್ದಿ ತಿಳಿದ ತಕ್ಷಣವೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಅತ್ತಿಬೆಲೆ ಪೊಲೀಸರು ಧಾವಿಸಿ ವಾಹನಗಳ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ಮೃತ ದೇಹಗಳನ್ನು ಆಕ್ಸ್‌ಫರ್ಡ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅತಿಯಾದ ವೇಗವೇ ಅಪಘಾತಕ್ಕೆ ಕಾರಣವೆಂದು ತಿಳಿದುಬಂದಿದೆ.