ಐಸಿಸ್ ಉಗ್ರರಿಂದ ೫೦ ಮಂದಿ ಶಿರಚ್ಛೇದ

ನವದೆಹಲಿ, ನ. ೧೧- ಪದೆ ಪದೇ ಜನಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟ ಆಡುವ ಇಸ್ಲಾಮಿಕ್ ಉಗ್ರರು ಪುಟ್ಬಾಲ್ ಕ್ರೀಡಾಂಗಣದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಜನರ ಶಿರಚ್ಛೇದ ಮಾಡಿರುವುದು ವರದಿಯಾಗಿದೆ.
ಆಫ್ರಿಕಾದ ಉತ್ತರ ಮೊಜಾಂಬಿಕ್‌ನ ಹಳ್ಳಿಯೊಂದರಲ್ಲಿ ಇಸ್ಲಾಮಿಕ್ ಉಗ್ರರು ಸುಮಾರು ೫೦ಕ್ಕೂ ಹೆಚ್ಚು ಜನರ ಶಿರಚ್ಛೇದ ಮಾಡಿದ್ದು ಉಗ್ರರು ಫುಟ್ಬಾಲ್ ಕ್ರೀಡಾಂಗಣವನ್ನು ಶಿರಚ್ಛೇದ ಮಾಡಲು ಬಳಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಗ್ರಾಮದ ಮೇಲೆ ದಾಳಿ ನಡೆಸಿದ ಉಗ್ರರು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಇತರ ಗ್ರಾಮದಲ್ಲಿ ಇನ್ನೂ ಕೆಲವು ಜನರ ಶಿರಚ್ಛೇದ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ೨೦೧೭ ರಿಂದ ಕ್ಯಾಬೊ ಡೆಲ್ಗಾಡೊ ಪ್ರಾಂತ್ಯದಲ್ಲಿ ಉಗ್ರರು ಸರಣಿ ದಾಳಿ ನಡೆಸುತ್ತಿದ್ದಾರೆ.
ಇಲ್ಲಿಯವರೆಗೆ ಸಂಘರ್ಷ ಪೀಡಿತ ಪ್ರಾಂತ್ಯದಲ್ಲಿ ಕನಿಷ್ಠ ೨,೦೦೦ ಜನರು ಸಾವನ್ನಪ್ಪಿದ್ದಾರೆ ಮತ್ತು ೪ ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಈ ಪ್ರದೇಶದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ಉದ್ದೇಶದಿಂದ, ಈ ಗುಂಪು ನಿರುದ್ಯೋಗ ಮತ್ತು ಬಡತನದಿಂದ ಸಂಕಷ್ಟದಲ್ಲಿರುವ ಯುವಕರನ್ನು ಸಂಘಟನೆಗೆ ನೇಮಿಸಿಕೊಳ್ಳುತ್ತಿದೆ.ಇತ್ತೀಚಿನ ದಾಳಿಯು ಭಯೋತ್ಪಾದಕರ ಸರಣಿಯ ದಾಳಿಯಲ್ಲಿ ಅತ್ಯಂತ ಭೀಕರ ಎಂದು ಹೇಳಲಾಗುತ್ತದೆ. ದಾಳಿಯ ಉಗ್ರತೆಯು, ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸಲು ಕರೆ ನೀಡಿದ ಜನರಿಗೆ ಆಘಾತವನ್ನುಂಟು ಮಾಡಿದೆ.