ಐಸಿಸಿ ಸಭೆ ನಿರ್ಣಯ ಅವೈಜ್ಞಾನಿಕ, ಮರುಪರಿಶೀಲಿಸಲಿ -ಮಾಲಿಪಾಟೀಲ್ 

ರಾಯಚೂರು, ನ.24- ನಾರಾಯಣಪೂರ ಜಲಾಶಯಕ್ಕೆ ಸಂಬಂಧಪಟ್ಟಂತೆ ಬುಧವಾರ ಬೆಂಗಳೂರಿನಲ್ಲಿ ರೈತ ಮುಖಂಡರನ್ನು ಹೊರಗಿಟ್ಟು ನಡೆಸಿದ ಐಸಿಸಿ ಸಭೆ ನಿರ್ಣಯಗಳು ರೈತರ ಪಾಲಿಗೆ ಮಾರಕವಾಗಿವೆ ಕೂಡಲೇ ಮರು ಪರಿಶೀಲಿಸಬೇಕು ಇಲ್ಲವಾದಲ್ಲಿ ಲಿಂಗ ಸೂಗರು,ದೇವದುರ್ಗದಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಎಚ್ಚರಿಸಿದರು. 

ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಯಾದಗಿರಿ, ದೇವದುರ್ಗ,ಲಿಂಗಸೂಗೂರು, ಸುರುಪೂರ ಸೇರಿದಂತೆ ಆಯಾ ಕ್ಷೇತ್ರದ ಶಾಸಕರು ಸಂಸದರು ಅಧಿಕಾರಿಗಳು ಸಭೆ ನಡೆಸಿ ಕೈಗೊಂಡಿರುವ ನಿರ್ಣಯವು ಅವೈಜ್ಞಾನಿಕವಾಗಿದೆ. ಅವರು ಕೈಗೊಂಡಿರುವ ನಿರ್ಣಯ ಯಥಾವತ್ತಾಗಿ ಜಾರಿಗೆ ತಂದರೆ, ಬಲದಂಡೆ ಕಾಲುವೆಯ ನೀರನ್ನೇ ನಂಬಿ ಮೆಣಸಿನಕಾಯಿ ಬೆಳೆದವರು ಸಂಕಷ್ಟಕ್ಕೆ ಸಿಲುಕುತ್ತಾರೆ. 8 ದಿನಗಳಿಗೊಮ್ಮೆ ನೀರು ಅವಶ್ಯ ಇರುವ ಮೆಣಸಿನಕಾಯಿ ಬೆಳೆಗಳು ಬಾಡಿಹೋಗುವುದಲ್ಲ ಒಣಗಿ ಹೋಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದರು.

ನ.23 ರಿಂದ ಡಿ.12 ರವರೆಗೆ ನೀರನ್ನು ಸ್ಥಗಿತಗೊಳಿಸುವ ನಿರ್ಣಯ ತೆಗೆದುಕೊಳ್ಳುವ ಮುನ್ನ ಕೃಷಿ ತಜ್ಞರನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅದಾವುದನ್ನು ಮಾಡಿದಂತೆ ಕಾಣುತ್ತಿಲ್ಲ. ಮುಂಗಾರು ಬೆಳೆಗೆ ಕೇವಲ ಒಂದು ತಿಂಗಳು ನೀರನ್ನು ರೈತರು ಸಮರ್ಪಕವಾಗಿ ಬಳಸಿಕೊಂಡಿದ್ದು, ಅಪಾರ ಪ್ರಮಾಣದ ನೀರು ನದಿಪಾಲಾಗಿದೆ. ಇಷ್ಟೊಂದು ಪ್ರಮಾಣಲ್ಲಿ ಮಳೆಯಾಗಿದ್ದಾಗಲೂ ಎರಡು ಜಲಾಶಯಗಳಿದ್ದಾಗಲೂ ಹಿಂಗಾರು ಬೆಳೆಗೆ ನೀರು ಕೊಡುವುದಕ್ಕೆ ಹಿಂದೇಟು ಹಾಕುವುದರ ಗುಟ್ಟೇ ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ಐಸಿಸಿ ನಿರ್ಣಯವನ್ನು ಪರಿಶೀಲಿಸಬೇಕು ಎಂದು ದೊಡ್ಡ ಮಟ್ಟದ ರೈತ ಹೋರಾಟವನ್ನು ಲಿಂಗಸೂಗೂರು ಇಲ್ಲವೇ ದೇವದುರ್ಗದಲ್ಲಿ ಹಮ್ಮಿಕೊಳ್ಳುವ ಚಿಂತನೆ ನಡೆದಿದೆ ಎಂದು ತಿಳಿಸಿದರು. 

ಈಗ ಭತ್ತ ಬೆಳೆದ ರೈತರನ್ನು ದಲ್ಲಾಳಿಗಳು ಯಾಮಾರಿಸುತ್ತಿದ್ದು, ಜಿಲ್ಲಾಧಿಕಾರಿಗಳು, ರೈತರ, ಮಧ್ಯವರ್ತಿಗಳ, ರೈಸಮಿಲ್ ಗಳ ಮಾಲಿಕರ ಸಭೆಯನ್ನು ಕರೆದು ರೈತರಿಗೂ ಹಾಗೂ ಮಿಲ್ ಮಾಲೀಕರಿಬ್ಬರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಒಂದು ತೀರ್ಮಾನಕ್ಕೆ ಬರಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರಭಾಕರ ಪಾಟೀಲ, ರಮೇಶ ಅಬಕಾರಿ, ಪ್ರಕಾಶ ಪಾಟೀಲ, ವಕೀಲರಾದ ಸಂಜೀವಗೌಡ ಉಪಸ್ಥಿತರಿದ್ದರು.