
ನವದೆಹಲಿ,ಆ.8-ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ವೇಳಾಪಟ್ಟಿಯಲ್ಲಿ ಇಂದು ಬದಲಾವಣೆ ಮಾಡಿ ಪ್ರಕಟಿಸಿದೆ. ನವರಾತ್ರಿ ಹಾಗೂ ದೀಪಾವಳಿಯ ಕಾರಣ ಕೆಲ ಪಂದ್ಯಗಳ ದಿನಾಂಕಗಳನ್ನು ಬದಲಾಯಿಸಲಾಗಿದೆ.
ಅಕ್ಟೋಬರ್ 15ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ಒಂದು ದಿನ ಮುಂಚಿತವಾಗಿ ಆಡಿಸಲು ನಿರ್ಧರಿಸಲಾಗಿದೆ. ಇದೀಗ ಅದೇ ಸ್ಥಳದಲ್ಲಿ ಅಕ್ಟೋಬರ್ 14ರಂದು ಪಂದ್ಯ ನಡೆಯಲಿದೆ.
ಈ ಮೊದಲು ಅಕ್ಟೋಬರ್ 14ರಂದು ದೆಹಲಿಯಲ್ಲಿ ನಡೆಯಬೇಕಿದ್ದ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯವನ್ನು ಅಕ್ಟೋಬರ್ 15ಕ್ಕೆ ಮುಂದೂಡಲಾಗಿದೆ.
ಹೈದರಾಬಾದ್‌ನಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ತಂಡದ ಹಣಾಹಣಿಯನ್ನು ಗುರುವಾರ, ಅಕ್ಟೋಬರ್ 12ಕ್ಕೆ ಮುಂಚಿತವಾಗಿ ಅಂದರೆ ಮಂಗಳವಾರ, ಅಕ್ಟೋಬರ್ 10ರಂದು ನಡೆಸಲು ತೀರ್ಮಾನಿಸಲಾಗಿದೆ.
ಲಕ್ನೋದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಆಸ್ಟ್ರೇಲಿಯಾ ತಂಡದ ಪಂದ್ಯವು ಅಕ್ಟೋಬರ್ 13 ಶುಕ್ರವಾರದ ಬದಲಿಗೆ ಅಕ್ಟೋಬರ್ 12ರಂದು ಗುರುವಾರ ಒಂದು ದಿನ ಮುಂಚಿತವಾಗಿ ನಡೆಯಲಿದೆ.
ಬಾಂಗ್ಲಾದೇಶ ತಂಡದ ವೇಳಾಪಟ್ಟಿಯಲ್ಲಿ ಒಂದೆರಡು ಬದಲಾವಣೆಗಳನ್ನು ಮಾಡಲಾಗಿದೆ. ಏಕೆಂದರೆ ನ್ಯೂಜಿಲೆಂಡ್ ವಿರುದ್ಧದ ಬಾಂಗ್ಲಾದೇಶ ಡೇ ಪಂದ್ಯವನ್ನು ಅಕ್ಟೋಬರ್ 14ರಂದು ನಿಗದಿಪಡಿಸಲಾಗಿದೆ. ಇದನ್ನು ಹಗಲು-ರಾತ್ರಿ ಪಂದ್ಯಕ್ಕೆ ವರ್ಗಾಯಿಸಲಾಗಿದೆ.
ನೆದರ್ಲ್ಯಾಂಡ್ಸ್ ವಿರುದ್ಧದ ಭಾರತ ತಂಡದ ಕೊನೆಯ ಲೀಗ್ ಪಂದ್ಯವನ್ನು ನವೆಂಬರ್ 11ರಿಂದ ನವೆಂಬರ್ 12ಕ್ಕೆ ಬದಲಾಯಿಸಲಾಗಿದೆ. ಇದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ಪಂದ್ಯ ಇದಾಗಿದೆ
ಅಕ್ಟೋಬರ್ 10ರಂದು ಹೊನಲು ಪಂದ್ಯವನ್ನಾಗಿ ನಿಗದಿಪಡಿಸಲಾಗಿದ್ದ ಧರ್ಮಶಾಲಾದಲ್ಲಿ ನಡೆಯುವ ಇಂಗ್ಲೆಂಡ್ ವಿರುದ್ಧದ ಬಾಂಗ್ಲಾದೇಶ ಪಂದ್ಯವನ್ನು ಈಗ ಬೆಳಿಗ್ಗೆ 10:30ರಿಂದ ಹಗಲು ವೇಳೆ ನಿಗದಿಪಡಿಸಲಾಗಿದೆ.
ನವೆಂಬರ್ 12ರಂದು ಭಾನುವಾರ ನಡೆಯಲಿರುವ ಡಬಲ್-ಹೆಡರ್ ಮುಖಾಮುಖಿ ಅಂದರೆ, ಪುಣೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ (ಬೆಳಿಗ್ಗೆ 10.30) ಮತ್ತು ಕೋಲ್ಕತ್ತಾದಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ (ಮಧ್ಯಾಹ್ನ 02.00), ಒಂದು ದಿನ ಮುಂಚಿತವಾಗಿ ಶನಿವಾರ, ನವೆಂಬರ್ 11ಕ್ಕೆ ಬದಲಾಯಿಸಲಾಗಿದೆ.
ಗುಜರಾತಿನಾದ್ಯಂತ ಆಚರಿಸಲಾಗುವ ನವರಾತ್ರಿ ಉತ್ಸವದ ಪ್ರಾರಂಭದೊಂದಿಗೆ ಪಂದ್ಯದ ದಿನಾಂಕವು ಇರುವುದರಿಂದ ಏಕದಿನ ವಿಶ್ವಕಪ್‌ನ ಅತಿದೊಡ್ಡ ಪಂದ್ಯಕ್ಕೆ ಭದ್ರತಾ ಸಮಸ್ಯೆಗಳು ಎದುರಾಗಿದ್ದವು. ಹೀಗಾಗಿ ಐಸಿಸಿ ಮತ್ತು ಬಿಸಿಸಿಐಗೆ ಭದ್ರತಾ ಪಡೆಗಳು ಮನವಿ ಮಾಡಿದ್ದರಿಂದ ಈ ಬದಲಾವಣೆ ಮಾಡಲಾಗಿದೆ.