ಐಸಿಸಿ ಚಾಂಪಿಯನ್ ಶಿಪ್ ಬಳಿಕ ಕೊಹ್ಲಿ ಪಡೆಗೆ 3 ವಾರ ವಿಶ್ರಾಂತಿ

ಲಂಡನ್, ಜೂ.8- ಸೌತಾಂಪ್ಟನ್ ನಲ್ಲಿ ನ್ಯೂಜೆಲೆಂಡ್ ವಿರುದ್ಧ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಬಳಿಕ ಭಾರತ ಕ್ರಿಕೆಟ್ ತಂಡಕ್ಕೆ ಮೂರು ವಾರಗಳ ವಿಶ್ರಾಂತಿ ನೀಡಲು ಬಿಸಿಸಿಐ ತೀರ್ಮಾನಿಸಿದೆ.
ಸುದೀರ್ಘ ಅವಧಿಯ ಪಂದ್ಯ ಹಾಗೂ ಬಯೋಬಬಲ್ ನಿಂದಾಗುವ ಮಾನಸಿಕ ಒತ್ತಡದಿಂದ ಹೊರಬರಲು ಬಿಸಿಸಿಐ ಆಟಗಾರರಿಗೆ ವಿಶ್ರಾಂತಿ ನೀಡಲು ಮುಂದಾಗಿದೆ.
ಐಸಿಸಿ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯವು ಜೂ.18ರಿಂದ 22ರವರೆಗೆ ನಡೆಯಲಿದೆ.
ಮೂರು ವಾರಗಳ ಆಟಗಾರರು ವಿಶ್ರಾಂತಿ ಪಡೆದ ನಂತರ ಜುಲೈ 14 ರಿಂದ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಗೆ ತಾಲೀಮು ಆರಂಭಿಸಲಿದೆ. ಆಗಸ್ಟ್‌ 14ರಿಂದ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧ ಸರಣಿ ನಡುವೆ 6 ವಾರಗಳ ಅಂತರ ಇರಲಿದೆ. ಇದರಿಂದ ಆಟಗಾರರ ಮಾನಸಿಕ ಆರೋಗ್ಯ ಕಾಪಾಡಲು ಸಾಧ್ಯವಾಗಲಿದೆ.
ರಜಾ ದಿನಗಳಲ್ಲಿ ಆಟಗಾರರು ಬ್ರಿಟನ್‌ನಲ್ಲಿ ಸ್ನೇಹಿತರು ಮತ್ತು ಕುಟುಂಬದವರ ಭೇಟಿಗೆ ತೆರಳಬಹುದು ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.