ಐಸಿಯುಗೆ ತಗ್ಗಿದ ಬೇಡಿಕೆ

ಬೆಂಗಳೂರು, ಜೂ.೧೧- ನಗರದಲ್ಲಿ ಕೋವಿಡ್ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಆಸ್ಪತ್ರೆಗಳಲ್ಲಿ ಐಸಿಯು ವಾರ್ಡ್‌ಗಳ ಬೇಡಿಕೆಯು ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ ಮಂಗಳವಾರ ೪೪ ಮಂದಿ ಸಾವನ್ನಪ್ಪಿದ್ದರು. ಬುಧವಾರ ೫೦ ಹಾಗೂ ಗುರುವಾರ ೪೭ ಮಂದಿ ಮೃತಪಟ್ಟಿದ್ದರು. ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳು ಖಾಲಿಯಿವೆ. ಬೆಂಗಳೂರಿನಲ್ಲಿ ನಿನ್ನೆ ಸಂಜೆ ನಾಲ್ಕು ಗಂಟೆಯವರೆಗೂ ಶೇ.೩೬ ರಷ್ಟು ಐಸಿಯು ಹಾಸಿಗೆಗಳು ಮತ್ತು ಶೇ. ೨೩ರಷ್ಟು ಐಸಿಯು ವೆಂಟಿಲೇಟರ್ ಬೆಡ್‌ಗಳು ಖಾಲಿ ಉಳಿದಿವೆ.
ಕಳೆದ ೧೧ ದಿನಗಳಲ್ಲಿ ನಗರದ ಆಸ್ಪತ್ರೆಗಳಲ್ಲಿ ಶೇ.೩.೩ ಐಸಿಯು ಹಾಸಿಗೆಗಳು ಮತ್ತು ಶೇ.೧.೫ ರಷ್ಟು ವೆಂಟಿಲೇಟರ್ ಹಾಸಿಗೆಗಳು ಖಾಲಿಯಿದ್ದವು. ದಿನದಿಂದ ದಿನಕ್ಕೆ ನಗರದಲ್ಲಿ ಮೃತರ ಸಂಖ್ಯೆ ಇಳಿಕೆಯಿಂದಾಗಿ ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆ ಖಾಲಿ ಇವೆ.
ನಿನ್ನೆಯುವರೆಗೂ ೫೭೪ ಐಸಿಯು ಹಾಸಿಗೆಗಳು ಲಭ್ಯವಿದ್ದವು. ಈ ಪೈಕಿ ೨೦೫ ಹಾಸಿಗೆಗಳು ಖಾಲಿ ಇವೆ. ೬೩೫ ಐಸಿಯು ಮತ್ತು ವೆಂಟಿಲೇಟರ್ ಹಾಸಿಗೆಯ ಪೈಕಿ ೧೪೫ ಹಾಸಿಗೆಗಳು ಖಾಲಿ ಇವೆ ಬಿಬಿಎಂಪಿ ವೆಬ್‌ಸೈಟ್ ಪ್ರಕಟಿಸಿದೆ.
ಮೃತಪಟ್ಟ ಕೋವಿಡ್ ರೋಗಿಗಳ ಅಂತ್ಯಕ್ರಿಯೆ ನಡೆಸಲು ತಾವರೆಕೆರೆ ಬಳಿ ತಾತ್ಕಾಲಿಕವಾಗಿ ಸ್ಥಾಪಿಸಿರುವ ಸ್ಮಶಾನಕ್ಕೆ ಬುಧವಾರದಿಂದ ಯಾವುದೇ ಮೃತದೇಹಗಳು ಅಂತ್ಯಕ್ರಿಯೆಗಾಗಿ ಬಂದಿಲ್ಲ. ಬಿಬಿಎಂಪಿ ವಿಶೇಷ ಆಯುಕ್ತ ಪಿ.ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಕೋವಿಡ್‌ನಿಂದ ಸಾವನ್ನಪ್ಪುವವರ ಸಂಖ್ಯೆ ಇಳಿಕೆಯಾಗಿದೆ. ಆಸ್ಪತ್ರೆಗಳಿಂದ ಬರುವ ನಿಧನ ವರದಿಗಳ ಮೇಲೆ ಅವಲಂಬಿತವಾಗಿಲ್ಲ.ಸ್ಮಶಾನಕ್ಕೆ ಬರುವ ಮೃತದೇಹಗಳ ಸಂಖ್ಯೆ ಹಾಗೂ ಹೋಮ್ ಐಸೋಲೇಷನ್‌ಗಳ ರೋಗಿಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸುವುದಾಗಿ ತಿಳಿಸಿದರು.
ಕೋವಿಡ್ ಸೋಂಕಿನ ರೋಗ ಲಕ್ಷಣಗಳ ಬಗ್ಗೆ ಹೋಂ ಐಸೋಲೇಷನ್‌ನಲ್ಲಿರುವ ರೋಗಿಗಳಿಗೆ ದೂರವಾಣಿ ಕರೆ ಮಾಡಿ ಟ್ರ್ಯಾಕ್ ಮಾಡುತ್ತೇವೆ. ಈ ಕರೆಗಳು ೧೦ ರಿಂದ ೨೦ ದಿನಗಳ ಅವಧಿಯಲ್ಲಿ ಮಾಡಲಾಗಿದೆ. ೧೯೧೮ ಸಂಖ್ಯೆಗೆ ತುರ್ತು ಸಂದರ್ಭದಲ್ಲಿ ಕರೆ ಮಾಡುವಂತೆಯೂ ಸೂಚಿಸಲಾಗುತ್ತಿದೆ. ಉಳಿದವರ ವಿಮಾ ಸೌಲಭ್ಯ ದೊರೆಯುವುನ್ನು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ ಎಂದು ಹೇಳಿದರು.
ಖಾಸಗಿ ಆಸ್ಪತ್ರೆಗಳಲ್ಲೂ ಸಾವಿನ ಪ್ರಮಾಣ ಇಳಿಕೆಯತ್ತ ಸಾಗಿದೆ. ಈಗ ಪರಿಸ್ಥಿತಿ ಸುಧಾರಿಸುತ್ತಿದೆ. ವೆಂಟಿಲೇಟರ್ ಬೆಡ್‌ಗಳು ಲಭ್ಯವಾಗುತ್ತಿವೆ ಎಂದು ತೀವ್ರ ಆರೈಕ ಘಟಕದ ವಿಶೇಷ ತಜ್ಞ ಡಾ. ಪ್ರದೀಪ್ ರಂಗಪ್ಪ ತಿಳಿಸಿದ್ದಾರೆ.
ಎರಡನೇ ಅಲೆ ಕಾಣಿಸಿಕೊಂಡ ಬಳಿಕ ನಗರದಲ್ಲೂ ಸಾವು-ನೋವು ಹೆಚ್ಚಳವಾಗಿದ್ದವು. ಸೋಂಕು ತಡೆಗೆ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಸೋಂಕು ಹತೋಟಗೆ ಬಂದಿದೆ. ಹಾಗೆಂದ ಮಾತ್ರಕ್ಕೆ ಮೈಮರೆಯುವುದು ಬೇಡ. ಮಾಸ್ಕ್, ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸರ್ ಬಳಸವುದುನ್ನು ಮುಂದುವರೆಸಬೇಕು.
ಮೂರನೇ ಅಲೆ ಸೋಂಕು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಗರಿಕರು ಜಾಗರೂಕತೆ ವಹಿಸುವಂತೆ ಬಿಬಿಎಂಪಿ ಕಿವಿಮಾತು ಹೇಳಿದೆ.