ಐಸಿಟಿ ಅಕಾಡೆಮಿ ಜೊತೆಗೆ
ಹೆಚ್ ಎಸ್ ಕೆ ಪಾಲಿಟೆಕ್ನಿಕ್ ಒಡಂಬಡಿಕೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.28: ನಗರದ ಪ್ರತಿಷ್ಠಿತ ಹೆಚ್ಎಸ್ ಕೆ ಪಾಲಿಟೆಕ್ನಿಕ್ ಕಾಲೇಜು ನಿನ್ನೆ ತಾಂತ್ರಿಕ ಬುದ್ದಿಮಟ್ಟ ಮತ್ತು ಕೌಶಲ್ಯತೆಯನ್ನು ಹೆಚ್ಚಿಸುವ ಕುರಿತಾಗಿ
ಐಸಿಟಿ ಅಕ್ಯಾಡೆಮಿ ಸಂಸ್ಥೆಯೊಡನೆ ಒಡಂಬಡಿಕೆಯನ್ನು ಮಾಡಿಕೊಂಡಿದೆ.
ಐಸಿಟಿ ಅಕ್ಯಾಡೆಮಿ ಸಂಸ್ಥೆಯು ಲಾಭರಹಿತ ಸಂಸ್ಥೆಯಾಗಿದ್ದು, ವಿವಿಧ ತಾಂತ್ರಿಕ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಮತ್ತು ಪ್ರಾಧ್ಯಾಪಕ ವರ್ಗದವರಿಗೆ ಸಂಘಟಿಸುತ್ತ ಅವರ ತಾಂತ್ರಿಕ ಬುದ್ದಿಮಟ್ಟ ಮತ್ತು ಕೌಶಲ್ಯತೆಯನ್ನು ಹೆಚ್ಚಿಸುತ್ತಾ ಬಂದಿದೆ. ಇತ್ತೀಚಿಗೆ ನಡೆದ ಬೆಳವಣಿಗೆಯಲ್ಲಿ  ಸಂಸ್ಥೆಯು ಪಾಲಿಟೆಕ್ನಿಕ್ ಕಾಲೇಜುಗಳಿಗೂ ಒಡಂಬಡಿಕೆಯನ್ನು ವಿಸ್ತರಿಸಿತ್ತು. ಆ ಮೂಲಕ ಹೆಚ್ ಎಸ್ ಕೆ ಪಾಲಿಟೆಕ್ನಿಕ್ ಬಳ್ಳಾರಿ, ಐಸಿಟಿ ಅಕ್ಯಾಡೆಮಿ ಜೊತೆಗೆ ಒಪ್ಪಂದ ಮಾಡಿಕೊಂಡ ಮೊದಲ ಪಾಲಿಟೆಕ್ನಿಕ್ ಎನಿಸಿದೆ.
ಈ ಒಪ್ಪಂದದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಮತ್ತು ಅಧ್ಯಾಪಕರುಗಳ ತಾಂತ್ರಿಕ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೆ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳಿಗೆ ತಕ್ಕಂತೆ ತರಬೇತಿ ನೀಡುವುದು ಮತ್ತು ಅವರುಗಳಿಗೆ ಎಲ್ಲಾ ರೀತಿಯ ತರಬೇತಿಯ ಮೂಲಕ ಕೈಗಾರಿಕೆಗಳ ಅವಕಾಶಗಳನ್ನು ಕೊಡಿಸುವುದು ಆಗಿದೆ ಎಂದು  ಕಾಲೇಜಿನ ಅಧ್ಯಕ್ಷ  ಹೆಚ್. ಎಂ. ಕಿರಣ್ ಕುಮಾರ್ ಹೇಳಿದ್ದಾರೆ.
ಕಾಲೇಜಿನ ಪ್ರಾಂಶುಪಾಲ ಡಾ ಟಿ. ಎಂ. ವೀರಗಂಗಾಧರ ಸ್ವಾಮಿ ಮಾತನಾಡಿ, ಐಸಿಟಿ ಅಕ್ಯಾಡೆಮಿಯಿಂದ ವಿವಿಧ ಕಂಪನಿಗಳ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸುವುದು ಮತ್ತು ಆ ಮೂಲಕ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಬಲಗೊಳಿಸುವುದಾಗಿದೆಂದರು.
ಒಡಂಬಡಿಕೆಯ ಸಮಯದಲ್ಲಿ ಜಿಎಂಐಟಿ ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರು ಮತ್ತು ಹೆಚ್ ಎಸ್ ಕೆ ಪಾಲಿಟೆಕ್ನಿಕ್ ಕಾಲೇಜಿನ ಸಲಹಾ ಮಂಡಳಿಯ ಸದಸ್ಯ ತೇಜಸ್ವಿ ಕಟ್ಟಿಮನಿ ಟಿ ಆರ್, ಐಸಿಟಿ ಅಕ್ಯಾಡೆಮಿ ಬಳ್ಳಾರಿ ವಿಭಾಗದ ಸಂಯೋಜಕ ಜಕಾವುಲ್ಲಾ ಎಂ ಎಸ್, ಕಾಲೇಜಿನ ಪ್ಲೇಸ್ಮೆಂಟ್ ವಿಭಾಗದ ಸಂಯೋಜಕ ಕುಲ್ಲಯ್ಯ ಸ್ವಾಮಿ ಉಪಸ್ಥಿತರಿದ್ದರು.