ಐಸಿಎಲ್ ಕಾರ್ಖಾನೆ ತಪ್ಪು ಮಾಹಿತಿ ನೀಡಿ ಅನುಮತಿ ಪಡೆಯಲು ಯತ್ನಿಸುತ್ತಿದೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.29: ಎಥೆನಾಲ್ ಘಟಕ ಆರಂಭಕ್ಕೆ ಸಂಬಂಧಿಸಿದಂತೆ ತಾಲೂಕಿನ ಕೋರಮಂಡಲ್ ಸಕ್ಕರೆ ಕಾರ್ಖಾನೆ ಕೇಂದ್ರ ಪರಿಸರ ಇಲಾಖೆಗೆ ತಪ್ಪು ಮಾಹಿತಿ ನೀಡಿ ಅನುಮತಿ ಪಡೆಯಲು ಪ್ರಯತ್ನಿಸುತ್ತಿದ್ದು ಇದನ್ನು ವಿರೋಧಿಸಿ ತಾಲೂಕು ರೈತಸಂಘ ಮಾರ್ಚ್ 01 ರ ಶುಕ್ರವಾರ ಬೆಂಗಳೂರಿನಲ್ಲಿರುವ ಪರಿಸರ ಮಾಲಿನ್ಯ ಇಲಾಖೆಗೆ ಕಾರ್ಖಾನೆ ಸುತ್ತಮುತ್ತಲ ಗ್ರಾಮಗಳ ರೈತರೊಂದಿಗೆ ನಿಯೋಗ ಹೋಗುತ್ತಿದೆ ಎಂದು ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ತಿಳಿಸಿದ್ದಾರೆ.
ತಾಲೂಕಿನ ಮಾಕವಳ್ಳಿ ಬಳಿಯಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಮುಂದೆ ಎಥೆನಾಲ್ ಘಟಕ ಸ್ಥಾಪನೆಯ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದ ಅನಂತರ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ನಿಯಮಾನುಸಾರ ನದಿ ದಂಡೆ, ಅರಣ್ಯ ಪ್ರದೇಶ ಮತ್ತು ಹಳ್ಳಿಗಳಿರುವ ಕಡೆ ಕಾರ್ಖಾನೆ ಆರಂಭಿಸುವಂತಿಲ್ಲ. ಕೋರಮಂಡಲ್ ಕಾರ್ಖಾನೆ ಹೇಮಾವತಿ ನದಿ ದಂಡೆಯಲ್ಲಿದ್ದು ಸುತ್ತಮುತ್ತ ಹತ್ತಾರು ಗ್ರಾಮಗಳಿವೆ. ಕಾರ್ಖಾನೆಯ ಹಿಂಭಾಗದಲ್ಲಿಯೇ ಮಂದಗೆರೆ ಎಡದಂಡೆ ನಾಲೆಯಿದ್ದು ನಾಲೆಯ ನೀರಿನಿಂದ ರೈತ ಸಮುದಾಯ ಆಹಾರ ಧಾನ್ಯಗಳ ಉತ್ಪಾದನೆ ಮಾಡುತ್ತಿದೆ. ಕಾರ್ಖಾನೆ ನದಿ ದಂಡೆಯಲ್ಲಿದೆ ಎನ್ನುವ ವಿಚಾರವನ್ನು ಬಚ್ಚಿಟ್ಟು ಸಕ್ಕರೆ ಉದ್ದಿಮೆಗೆ ಪರವಾನಿಗೆ ಪಡೆದಿದೆ. ಆರಂಭಗೊಂಡಿರುವ ಸಕ್ಕರೆ ಕಾರ್ಖಾನೆಯ ಬಗ್ಗೆ ನಮ್ಮ ಯಾವುದೇ ತಕರಾರು ಇಲ್ಲ. ಕಾರ್ಖಾನೆ ನಮ್ಮ ರೈತರ ಜೀವನಾಡಿ. ರೈತರ ಜೀವನಾಡಿಯಾಗಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆ ಕೋ-ಜನ್ ಘಟಕ ಆರಂಭಿಸಿ ಈಗಾಗಲೇ ಕಾರ್ಖಾನೆಯ ಸುತ್ತಮುತ್ತಲ ಜನರ ಬದುಕನ್ನು ನರಕವಾಗಿಸಿದೆ. ಇದೀಗ ಎಥೆನಾಲ್ ಘಟಕ ಮತ್ತು ಮದ್ಯಸಾರ ಘಟಕ ಆರಂಭಕ್ಕೆ ಮುಂದಾಗಿದ್ದು ರೈತರ ಬದುಕನ್ನೇ ನಾಶಪಡಿಸಲು ಮುಂದಾಗಿದೆ ಎಂದು ಕಿಡಿಕಾರಿರುವ ಎಂ.ವಿ.ರಾಜೇಗೌಡ ಜನರ ಬದುಕಿನ ಉಳಿವಿಗೆ ಹೋರಾಟ ಮಾಡುತ್ತಿರುವ ರೈತಸಂಘದ ವಿರುದ್ದ ಕಾರ್ಖಾನೆ ತನ್ನ ಏಜಂಟರು ಮತ್ತು ಗುತ್ತಿಗೆದಾರರ ಮೂಲಕ ಅಪಪ್ರಚಾರ ನಡೆಸುತ್ತಿದೆ ಎಂದು ದೂರಿದ್ದಾರೆ.
ಕೋರಮಂಡಲ್ ಕಾರ್ಖಾನೆ ತನ್ನ ಗುತ್ತಿಗೆದಾರರನ್ನೆ ಅಧ್ಯಕ್ಷರನ್ನಾಗಿ ಮಾಡಿಕೊಂಡು ಕಬ್ಬು ಬೆಳೆಗಾರರ ಸಂಘ ರಚಿಸಿಕೊಂಡಿದೆ. ಕಾರ್ಖಾನೆಯ ಕಬ್ಬು ಬೆಳೆಗಾರರ ಸಂಘಕ್ಕೂ ರಾಜ್ಯ ರೈತಸಂಘಕ್ಕೂ ಯಾವುದೇ ಸಂಬಂಧವಿಲ್ಲ. ಸಕ್ಕರೆ ಉತ್ಪಾದನೆಗೆ ಮಾತ್ರ ಪರವಾನಿಗೆ ಪಡೆದಿರುವ ಕೋರಮಂಡಲ್ ಕಾರ್ಖಾನೆ ಕೇವಲ ಸಕ್ಕರೆ ಉತ್ಪಾದನೆ ಮಾತ್ರ ಮಡಲಿ. ಅದನ್ನು ಬಿಟ್ಟು ಎಥೆನಾಲ್ ಘಟಕ ಮತ್ತು ಮದ್ಯಸಾರ ಘಟಕ ಆರಂಭಿಸಿ ಹೇಮಾವತಿ ನದಿಯನ್ನು ಕಲುಷಿತಗೊಳಿಸುವುದಕ್ಕೆ ನಮ್ಮ ವಿರೋಧವಿದೆ. ಹೇಮಾವತಿ ನಮ್ಮೆಲ್ಲರ ಜೀವನಾಡಿ. ಹೇಮೆ ಕಲುಷಿತಗೊಂಡರೆ ಹೇಮೆಯ ನೀರನ್ನು ಆಶ್ರಯಿಸಿ ಬದುಕುತ್ತಿರುವ ಕೆ.ಆರ್.ಪೇಟೆ ಪಟ್ಟಣಿಗರು ಮತ್ತು ನದಿ ದಂಡೆಯ ಜನ ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಜೊತೆಗೆ ಕಾರ್ಖಾನೆಯ ತ್ಯಾಜ್ಯಯುಕ್ತ ಕಲುಷಿತ ನೀರಿನಿಂದ ಕಾರ್ಖಾನೆಯ ಸುತ್ತಮುತ್ತ ರೈತರ ಕೃಷಿ ಹಾಳಾಗುತ್ತದೆ.
ಎಥೆನಾಲ್ ಘಟಕ ಆರಂಭವನ್ನು ವಿರೋಧಿಸಿ ರಾಜ್ಯ ರೈತಸಂಘ ಹಸಿರು ನ್ಯಾಯಾಲಯಕ್ಕೆ ಹೋಗಿದ್ದು ಅಲ್ಲಿಯೂ ಕಾರ್ಖಾನೆ ಎಥೆನಾಲ್ ಘಟಕ ಮತ್ತು ಮದ್ಯಸಾರ ಘಟಕ ಆರಂಭಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಹೇಳಿಕೆ ನೀಡಿದೆ. ಇದೆಲ್ಲದರ ಅರಿವಿದ್ದರೂ ಜಿಲ್ಲಾಡಳಿತ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ ಕಾರ್ಖಾನೆಯ ಪರ ಕೆಲಸ ಮಾಡುತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವ ಬದಲು ಯಾರೊಬ್ಬರಿಗೂ ಮಾಹಿತಿ ನೀಡದೆ ಜಿಲ್ಲಾಡಳಿತ ಮಾರ್ಚ್ 06 ರಂದು ಜನಾಭಿಪ್ರಾಯ ಸಂಗ್ರಹ ಸಭೆ ಆಯೋಜಿಸಿದೆ. ಇದನ್ನು ವಿರೋಧಿಸಿ ಮಾರ್ಚ್ 01 ರಂದು ರೈತಸಂಘ ಬೆಂಗಳೂರಿನ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿಯ ಮುಂದೆ ಕಾರ್ಖಾನೆಯ ಸುತ್ತಮುತ್ತಲ ರೈತರ ನಿಯೋಗದೊಂದಿಗೆ ತನ್ನ ಅಹವಾಲು ಮಂಡಿಸಿ ಎಥೆನಾಲ್ ಘಟಕ ಸ್ಥಾಪನೆಯ ವಿರುದ್ದ ಪ್ರತಿಭಟಿಸಲಿದೆ ಎಂದು ಎಂ.ವಿ.ರಾಜೇಗೌಡ ತಿಳಿಸಿದ್ದಾರೆ