ಐಷಾರಾಮಿ ಕಾರ್ ಮಾರಾಟ ಪ್ರಕರಣ: ಪೊಲೀಸರ ವಿಚಾರಣೆ

ಮಂಗಳೂರು, ಜೂ.೭- ವಂಚನಾ ಪ್ರಕರಣದ ಆರೋಪಿಗಳ ಐಷಾರಾಮಿ ಕಾರನ್ನು ಮಾರಾಟ ಮಾಡಿದ್ದಾರೆ ಎನ್ನಲಾದ ಆರೋಪಿತ ಮಂಗಳೂರು ಸಿಸಿಬಿ ಪೊಲೀಸರನ್ನು ಸಿಐಡಿ ಅಧಿಕಾರಿಗಳ ತಂಡ ಮಂಗಳೂರಲ್ಲಿ ಎರಡು ದಿನಗಳ ತನಿಖೆ ಪೂರೈಸಿ ರವಿವಾರ ಬೆಂಗಳೂರಿಗೆ ತೆರಳಿದೆ. ಈ ತಂಡವು ಶೀಘ್ರ ತನಿಖಾ ವರದಿಯನ್ನು ಡಿಜಿಪಿಗೆ ಸಲ್ಲಿಸುವ ನಿರೀಕ್ಷೆ ಇದೆ. ಪ್ರಕರಣದ ತನಿಖೆ ಪೂರ್ಣಗೊಂಡ ಬಳಿಕ ಇಲಾಖಾ ತನಿಖೆ (ಡಿಇ) ನಡೆಯುವ ಸಂಭವ ಇದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ರಾಜ್ಯ ಸಿಐಡಿ ಎಸ್ಪಿ ಭೀಮಾಶಂಕರ್ ಮತ್ತು ಇನ್‌ಸ್ಪೆಕ್ಟರ್ ಚಂದ್ರಪ್ಪ ನೇತೃತ್ವದ ತಂಡ ಶುಕ್ರವಾರ ಮಂಗಳೂರಿಗೆ ಆಗಮಿಸಿತ್ತು. ಶನಿವಾರ ದಿನವಿಡೀ ತನಿಖೆ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದಿನ ಸಿಸಿಬಿ ಇನ್‌ಸ್ಪೆಕ್ಟರ್ ಶಿವಪ್ರಕಾಶ್, ನಾರ್ಕೊಟಿಕ್ ಆ?ಯಂಡ್ ಎಕಾನಾಮಿಕ್ ಠಾಣಾ ಇನ್‌ಸ್ಪೆಕ್ಟರ್ ರಾಮಕೃಷ್ಣ, ಸಿಸಿಬಿ ಎಸ್ಸೈ ಕಬ್ಬಳ್ ರಾಜ್ ಅವರನ್ನು ವಿಚಾರಣೆ ನಡೆಸಿತ್ತು. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿ ಹಿರಿಯ ಅಧಿಕಾರಿಗಳ ಸೂಚನೆಯಂತೆ ಆಂತರಿಕ ವರದಿ ನೀಡಿದ ಮಂಗಳೂರು ನಗರದ ನಿಕಟಪೂರ್ವ ಡಿಸಿಪಿ ವಿನಯ ಗಾಂವ್ಕರ್ ಅವರಿಂದಲೂ ಹೇಳಿಕೆ ಪಡೆದುಕೊಂಡಿತ್ತು ಎಂದು ತಿಳಿದುಬಂದಿತ್ತು. ಸಿಐಡಿ ತನಿಖೆ ಪೂರ್ತಿಗೊಳಿಸಿದ ವರದಿಯನ್ನು ಡಿಜಿಪಿಗೆ ಸಲ್ಲಿಸಿದ ಬಳಿಕ ಪ್ರಕರಣದ ಆರೋಪದ ಸತ್ಯಾಸತ್ಯತೆ ಸ್ಪಷ್ಟಗೊಳ್ಳಲಿದೆ. ಒಂದು ವೇಳೆ ತನಿಖಾ ವರದಿಯಲ್ಲಿ ಆರೋಪ ಸಾಬೀತಾದರೆ ಎಫ್‌ಐಆರ್ ದಾಖಲಿಸಲು ಸಿಐಡಿ ಸೂಚನೆ ನೀಡಲಿದೆ ಎಂದು ತಿಳಿದು ಬಂದಿದೆ. ಗುರುತರ ಆರೋಪ ಇಲ್ಲದಿದ್ದರೆ ನಾಲ್ವರ ಅಮಾನತು ತೆರವಾಗಲಿದೆ. ಒಟ್ಟಿನಲ್ಲಿ ಸಿಐಡಿ ತನಿಖಾ ವರದಿಯನ್ನು ಆಧರಿಸಿ ಮುಂದಿನ ಕ್ರಮ ಏನು ಎಂಬುದು ನಿರ್ಧಾರವಾಗಲಿದೆ. ಸಿಐಡಿ ತಂಡದ ವರದಿ ಸಲ್ಲಿಕೆಯಲ್ಲದೆ ಪೊಲೀಸ್ ಇಲಾಖೆಯ ನಿಯಮ ಪ್ರಕಾರದ ಆಂತರಿಕ ತನಿಖೆ ನಡೆಯಲಿದೆ. ಅದರ ವಿಚಾರಣೆಯು ಶೀಘ್ರ ನಡೆಯಲಿದೆ. ಈ ವಿಚಾರಣೆಯನ್ನು ಪೊಲೀಸ್ ಕಮಿಷನರೇಟ್ ಹಂತದಲ್ಲಿ ಹಿರಿಯ ಅಧಿಕಾರಿಗಳೇ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಇದರಲ್ಲಿ ಕೂಡ ಆರೋಪಕ್ಕೆ ಸಂಬಂಧಿಸಿ ಪ್ರತ್ಯೇಕ ವಿಚಾರಣೆ ನಡೆಯಲಿದೆ.
ಏನಿದು ಪ್ರಕರಣ? ೨೦೨೦ರ ಅ.೧೬ರಂದು ಶಕ್ತಿನಗರದ ಮಹಿಳೆಯೊಬ್ಬರು ನಾರ್ಕೋಟಿಕ್ ಠಾಣೆಯಲ್ಲಿ ವಂಚನಾ ಕೇಸು ದಾಖಲಿಸಿದ್ದರು. ಇದರ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದರು. ಈ ವೇಳೆ ಸಿಸಿಬಿ ಪೊಲೀಸರು ಸೇರಿ ೫೦ ಲಕ್ಷ ರೂ. ಮೊತ್ತದ ಜಾಗ್ವಾರ್ ಕಾರು ಮಾರಾಟ ಮಾಡಿದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ೨೦೨೧ ಫೆ.೪ರಂದು ಎಡಿಜಿಪಿ ಅವರು ಆಂತರಿಕ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್‌ಗೆ ಆದೇಶ ನೀಡಿದ್ದರು. ಡಿಸಿಪಿ ವಿನಯ ಗಾಂವ್ಕರ್ ಫೆ.೧೪ರಂದು ಆಂತರಿಕ ತನಿಖೆ ನಡೆಸಿದ ವರದಿ ಸಲ್ಲಿಸಿದ್ದರು. ಇದರ ಆಧಾರದಲ್ಲಿ ಇಬ್ಬರು ಪೊಲೀಸ್ ಅಧಿಕಾರಿ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿತ್ತು. ಫೆ.೧೬ರಂದು ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಗಿತ್ತು.