ಪ್ರಯಾಗರಾಜ್ (ಉತ್ತರ ಪ್ರದೇಶ),ಜೂ.೫- ತ್ರಿವೇಣಿ ಸಂಗಮದಲ್ಲಿ ಸ್ನಾನಕ್ಕೆಂದು ತೆರಳಿದ್ದ ಐವರು ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ಪ್ರಯಾಗರಾಜ್‌ನ ಸಂಗಮ ನಗರಿಯಲ್ಲಿ ನಡೆದಿದೆ.
ನಿನ್ನೆ ಸಂಜೆ ೧೫ ವಿದ್ಯಾರ್ಥಿಗಳು ಗಂಗಾ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದರು. ಈ ಪೈಕಿ ೯ ವಿದ್ಯಾರ್ಥಿಗಳು ಸ್ನಾನ ಮಾಡುವಾಗ ಆಳದ ನೀರಿನಲ್ಲಿ ಮುಳುಗಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಈ ಸಮಯದಲ್ಲಿ ಬಲವಾದ ಬಿರುಗಾಳಿ ಬೀಸುತ್ತಿತ್ತು. ಗಾಳಿಯ ರಭಸಕ್ಕೆ ನೀರಿನ ಹರಿವು ತೀವ್ರಗೊಂಡಿದೆ. ಪ್ರವಾಹದ ಸೆಳೆತಕ್ಕೆ ಸಿಲುಕಿ ಸ್ನಾನ ಮಾಡುತ್ತಿದ್ದ ೯ ಮಂದಿ ನೀರಿನಲ್ಲಿ ಮುಳುಗಲಾರಂಭಿಸಿದ್ದಾರೆ. ತಕ್ಷಣ ನೀರಿಗೆ ಇಳಿದ ಘಾಟ್‌ನಲ್ಲಿದ್ದ ಜಲಸಂಪನ್ಮೂಲ ಪೊಲೀಸ್ ಸಿಬ್ಬಂದಿ ಮತ್ತು ಡೈವರ್‌ಗಳು ನಾಲ್ವರನ್ನು ರಕ್ಷಿಸುವಲ್ಲಿ ಯಶಸ್ವಿ ಆಗಿದ್ದರು. ಆದರೆ, ಇತರ ಐದು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಘಟನೆ ನಡೆದ ಸ್ಥಳಕ್ಕೆ ದಾರಗಂಜ್ ಪೊಲೀಸರೊಂದಿಗೆ ಎನ್‌ಡಿಆರ್‌ಎಫ್ ತಂಡ ಆಗಮಿಸಿ ಮುಳುಗಿದವರಿಗಾಗಿ ಶೋಧ ಕಾರ್ಯ ಆರಂಭಿಸಿದೆ. ಸುಮಾರು ಎರಡೂವರೆ ಗಂಟೆಗಳ ಕಾಲ ಹುಡುಕಾಟ ನಡೆಸಿದರೂ ಯಶಸ್ವಿಯಾಗಿಲ್ಲ ಎಂದು ತಿಳಿದು ಬಂದಿದೆ.
ನಾಪತ್ತೆಯಾದವರನ್ನು ಮಹೇಶ್ವರ್ ವರ್ಮಾ, ಸುಮಿತ್ ವಿಶ್ವಕರ್ಮ, ವಿಶಾಲ್ ವರ್ಮಾ, ಉತ್ಕರ್ಷ್ ಕುಮಾರ್ ಗೌತಮ್ ಹಾಗೂ ಅಭಿಷೇಕ್ ಅಗ್ರಹಾರಿ ಎಂದು ಗುರುತಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳು ೧೭ ರಿಂದ ೨೨ ವರ್ಷದವರು. ಇವರು ದರಗಂಜ್ ಮತ್ತು ಜಾರ್ಜ್‌ಟೌನ್ ಬಳಿ ಬಾಡಿಗೆಗೆ ಇದ್ದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.