ಐವರು ಡ್ರಗ್ಸ್ ಪೆಡ್ಲರ್ ಗಳ ಸೆರೆ 30 ಲಕ್ಷ ಮಾಲು ವಶ

ಬೆಂಗಳೂರು, ಜೂ.೧೦-ಡ್ರಗ್ಸ್ ಮಾರಾಟ ಸರಬರಾಜು ವಿರುದ್ಧ ಕಾರ್ಯಾಚರಣೆ ತೀವ್ರ ಗೊಳಿಸಿರುವ ಸಿಸಿಬಿ ಪೊಲೀಸರು ಐವರು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿ ೩೦ ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಬಯ್ಯಾನ್ ಅನ್ಸಾರಿ(೨೬)ಅರ್ನಾಲ್ಡ್ ಪಾಸ್ಕಲ್ ಡಿಸೋಜಾ(೨೭)ಅನಿರುಧ್ ವೆಂಕಟಾಚಲಂ(೨೩)ಕಾನಿಷ್ಕ್ ರೆಡ್ಡಿ(೨೩)ಹಾಗೂ ಸಂತೋಷ್ (೨೮)ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿಗಳಿಂದ ೩೦ ಲಕ್ಷ ಮೌಲ್ಯದ ಎಂಡಿಎಎ ಎಕ್ಸ್ಟೆಸಿ ಮಾತ್ರೆಗಳು, ಎಲ್‌ಎಸ್‌ಡಿ ಸ್ಟಿಪ್ ಗಳು ಮತ್ತು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಬಂಧಿತ ಆರೋಪಿಗಳ ಜೊತೆಗೆ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ ಇನ್ನೂ ೬ ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು ಒಟ್ಟು ೧೧ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಬೆನ್ನತ್ತಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ಹಣ ಹೂಡಿಕೆ ಮಾಡಿಕೊಂಡು ಡಾರ್ಕ್ ವೆಬ್ ನಿಂದ ಮಾಹಿತಿಯನ್ನು ಪಡೆದುಕೊಂಡು ಆಪ್‌ನಲ್ಲಿ ಬಿಟ್ ಕಾಯಿನ್ ಮೂಲಕ ಕಡಿಮೆ ಹಣ ಪಾವತಿಸಿ ಕೂರಿಯರ್ ನಲ್ಲಿ ಎಂಡಿಎಎ ಎಕ್ಸ್ಟೆಸಿ ಮಾತ್ರೆಗಳು,ಗಾಂಜಾ ಎಲ್‌ಎಸ್‌ಡಿ ಸ್ಟಿಪ್ ಗಳನ್ನು ತರಿಸಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು.
ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳಿಗ್ಗೆ ೬ ರಿಂದ ೧೦ರವರೆಗೆ ಕಾಲೇಜು ವಿದ್ಯಾರ್ಥಿಗಳು ಐಟಿ ಬಿಟಿ ಉದ್ಯೋಗಿಗಳು ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಅವರು ತಿಳಿಸಿದರು.