ಐಬಿ ರಸ್ತೆ ಮಾವಿನ ಕೆರೆ ಜಮೀನು ಅತಿಕ್ರಮಣ – ಶೆಡ್ ನಿರ್ಮಾಣ

ಸರ್ಕಾರಿ ಜಮೀನಿಗೆ ನಗರಸಭೆಯಿಂದ ಖಾತೆ – ಕ್ರಮಕ್ಕೆ ಒತ್ತಾಯ
ರಾಯಚೂರು.ಜ.೦೭- ಕೆರೆ ಕುಂಟೆ ಮುಚ್ಚುವುದು ನಂತರ ಅತಿಕ್ರಮಿಸಿ ಆರಂಭದಲ್ಲಿ ಟಿನ್ ಶೆಡ್ ನಂತರ ಬೃಹತ್ ಕಟ್ಟಡದ ಮೂಲಕ ಕೋಟ್ಯಾಂತರ ಬೆಲೆ ಬಾಳುವ ಸರ್ಕಾರಿ ಜಮೀನು ಅತಿಕ್ರಮಣಕ್ಕೆ ಹೊಸ ಹೊಸ ತಂತ್ರ ರೂಪಿಸಲಾಗುತ್ತಿದೆ.
ಸರ್ಕಾರಿ ಜಮೀನು ಬಹಿರಂಗವಾಗಿ ಅತಿಕ್ರಮಿಸಿ, ಅಧಿಕೃತ ದಾಖಲೆ ಸೃಷ್ಟಿಸಿ, ಹಾಡುಹಗಲೇ ಸರ್ಕಾರಿ ಜಮೀನು ಅತಿಕ್ರಮಿಸುವುದನ್ನು ಜಿಲ್ಲಾಡಳಿತದಿಂದಿಡಿದು ನಗರಸಭೆಯ ಎಲ್ಲಾ ಅಧಿಕಾರಿಗಳು ಕಂಡರೂ, ಕಾಣದಂತೆ ನಿರ್ಲಕ್ಷ್ಯಿಸುವ ಮೂಲಕ ಅತಿಕ್ರಮಣದಾರರಿಗೆ ನೆರವಾಗಿ ನಗರದಲ್ಲಿ ಕೆರೆ ಕುಂಟೆ ಮತ್ತು ಸರ್ಕಾರಿ ಜಮೀನು ಕಣ್ಮರೆಯಾಗುವುದಕ್ಕೆ ಕಾರಣರಾಗುತ್ತಿದ್ದಾರೆ. ಇಂತಹದ್ದೇ ಪ್ರಕರಣ ಈಗ ದೂರಿನ ರೂಪದಲ್ಲಿ ಜಿಲ್ಲಾಡಳಿತದ ಮುಂದೆ ಬಂದಿದೆ.
ದಲಿತ ಸಂಘರ್ಷ ಸಮಿತಿ (ಜೈ ಭೀಮಾ ಘರ್ಜನೆ) ಜಿಲ್ಲಾಧಿಕಾರಿಗಳಿಗೆ ನೀಡಿದೆ. ವಾರ್ಡ್ ೧೨ ಐಡಿಎಸ್‌ಎಂಟಿ ಲೇಔಟ್ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮಾವಿನ ಕೆರೆಗೆ ಹತ್ತಿಕೊಂಡಿರುವ ಜಮೀನಿನಲ್ಲಿ ೧೦೦x೧೦೦ ಅಡಿ ಸ್ಥಳ ಸ್ವಚ್ಛಗೊಳಿಸಿ, ಮಣ್ಣು ತುಂಬಿ, ಒಂದು ನೀಲಿ ಬಣ್ಣದ ಟಿನ್ ಶೆಡ್ ನಿರ್ಮಿಸಲಾಗಿದೆಂದು ದೂರಲಾಗಿದೆ. ಈ ಜಮೀನು ಮೇಲ್ನೋಟಕ್ಕೆ ಮಾವಿನ ಕೆರೆ ವ್ಯಾಪ್ತಿಗೆ ಸೇರಿರುವುದು ಸ್ಪಷ್ಟವಾಗಿದೆ. ಮಾವಿನ ಕೆರೆ ಈ ಸ್ಥಳದಲ್ಲಿ ಜೆಸ್ಕಾಂ ಇಲಾಖೆಯಿಂದ ೩ ಕಂಬಗಳನ್ನು ಹಾಕಲಾಗಿದೆ.
ಈ ಜಮೀನಿಗೆ ನಗರಸಭೆಯಿಂದ ಯಾವ ಆಧಾರದ ಮೇಲೆ ಖಾತೆ ನೀಡಲಾಗಿದೆ ಎನ್ನುವುದು ಮತ್ತೊಂದು ವಿವಾದಕ್ಕೆ ದಾರಿ ಮಾಡಿದೆ. ಸರ್ಕಾರಿ ಜಮೀನಿಗೆ ಖಾತೆ ನೀಡುವುದು ನಿಯಮ ಬಾಹೀರವಾಗಿದೆ. ಕೆರೆ ದಡದಲ್ಲಿರುವ ಈ ಜಮೀನಿಗೆ ಕಂದಾಯ ಅಧಿಕಾರಿಗಳು ಯಾವ ರೀತಿ ಖಾತೆ ನೀಡಲಾಗಿದೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಸರ್ವೇ ನಂ.೧೨೩೨ ಸರ್ಕಾರಿ ಜಮೀನು ಎಂದು ದಾಖಲಾತಿಯಿದ್ದು, ಇಂತಹ ಸ್ಥಳದಲ್ಲಿ ಖಾತಾ ನಕಲು ಮತ್ತು ಮೋಟೇಷನ್‌ನೊಂದಿಗೆ ಟಿನ್ ಶೆಡ್ ಹಾಕಿದ್ದರೂ, ಇದನ್ನು ನಗರಸಭೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದಿರುವುದು ಭಾರೀ ಅನುಮಾನಗಳಿಗೆ ದಾರಿ ಮಾಡಿದೆ.
ಅತ್ಯಂತ ಬೆಲೆ ಬಾಳುವ ಮತ್ತು ನಗರದ ಅಂತರ್ಜಲ ವೃದ್ಧಿಗೆ ಮಹತ್ವದ ಪಾತ್ರ ವಹಿಸುವ ಮಾವಿನ ಕೆರೆ ಸ್ಥಳ ಬಹಿರಂಗವಾಗಿ ಅತಿಕ್ರಮಣವಾಗುತ್ತಿದ್ದರೂ, ಇದನ್ನು ತಡೆಯಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾದರೂ ಏಕೆ?
ಈ ಕುರಿತು ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕು, ಸರ್ಕಾರಿ ಜಮೀನಿಗೆ ನಂಬರ್ ನೀಡಿ, ಖಾತಾ ನಕಲು ನೀಡಿ, ಜೆಸ್ಕಾಂ ಇಲಾಖೆಗೆ ವಿದ್ಯುತ್ ಸರಬರಾಜು ಮಾಡಲು ಆಕ್ಷೇಪಣಾ ರಹಿತ ಪತ್ರ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತಕ್ಷಣವೇ ಡಬ್ಬಾ ತೆರವುಗೊಳಿಸಿ, ೧೦೦x೧೦೦ ಸ್ಥಳ ಬೆಲೆ ಬಾಳುವ ಸ್ಥಳವನ್ನು ಸಂರಕ್ಷಿಸುವಂತೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಂ.ವಸಂತಕುಮಾರ ಅವರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.