ಐಪಿಎಲ್ 2020: ಆರ್ ಸಿಬಿ ಶುಭಾರಂಭ

ದುಬೈ, ಸೆ. 22- ಯುಎಇಯಲ್ಲಿ ಕ್ರಿಕೆಟ್ ಕಲರವ ಅದ್ದೂರಿಯಾಗಿ ಆರಂಭವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 13 ನೇ ಆವೃತ್ತಿಯಲ್ಲಿ ಅಭಿಯಾನ ಆರಂಭಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭ ಮಾಡಿದೆ.
ಆರ್ ಸಿಬಿ, ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ 10 ರನ್ ಗಳ ಗೆಲುವು ಸಾಧಿಸಿದೆ.
ಬ್ಯಾಟಿಂಗ್ ನಲ್ಲಿ ಅಷ್ಟೇನು ಉತ್ತಮವಾಗಿರದಿದ್ದರೂ ಬೌಲಿಂಗ್ ನಲ್ಲಿ ಆರ್ ಸಿಬಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಪಂದ್ಯ ತನ್ನದಾಗಿಸಿಕೊಂಡಿತು.

ಬೇರ್ ಸ್ಟೋ ಅರ್ಧಶತಕ:
ಆರ್ ಸಿಬಿ ನೀಡಿದ 164 ರನ್ ಗಳ ಗುರಿ ಬೆನ್ನತ್ತಿದ ಹೈದ್ರಾಬಾದ್ ಆರಂಭದಲ್ಲಿ ನಾಯಕ ಡೇವಿಡ್ ವಾರ್ನರ್ (6) ವಿಕೆಟ್ ಕಳೆದುಕೊಂಡಿತು. ಜಾನಿ ಬೇರ್ ಸ್ಟೋ, ಮನೀಶ್ ಪಾಂಡೆ ಯೊಂದಿಗೆ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಮನೀಶ್ (34) ರನ್ನು ಸ್ಪಿನ್ನರ್ ಚಹಲ್ ಪೆವಿಲಿಯನ್ ಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಈ ಮೂಲಕ. 2 ನೇ ವಿಕೆಟ್ ಜೊತೆಯಾಟವನ್ನು ಮುರಿದರು. ಬಳಿಕ ಪ್ರಿಯಂ ಗರ್ಗ್ ಜೊತೆ ಬೇರ್ ಸ್ಟೋ ವೇಗದ ಆಟಕ್ಕೆ ಮೊರೆ ಹೋದರು. ಬೇರ್ ಸ್ಟೋ ನೀಡಿದ. 3 ಕ್ಯಾಚ್ ಗಳನ್ನು ಆರ್ ಸಿಬಿ ಆಟಗಾರರು ಕೈ ಚೆಲ್ಲಿದರು. ಇದರ ಲಾಭ ಪಡೆದ ಬೇರ್ ಸ್ಟೋ (61) ರನ್ ಗಳಿಸಿದರು. ಚಹಲ್ ಗೂಗ್ಲಿ ಯನ್ನು ಅರಿಯದೇ ಬೌಲ್ಡ್ ಆದರು. ನಂತರದ ಎಸೆತದಲ್ಲಿ ವಿಜಯ್ ಶಂಕರ್ (0) ಡಕ್ ಔಟ್ ಆದರು. ಈ ವಿಕೆಟ್ ಬೀಳುತ್ತಿದ್ದಂತೆ ಹೈದ್ರಾಬಾದ್ ಪಾಳಯದಲ್ಲಿ ನಡುಕ ಶುರುವಾಯಿತು. 121 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಹೈದ್ರಾಬಾದ್ ನಂತರದ 32 ರನ್ ಗಳಿಸುವಲ್ಲಿ ಆಲೌಟ್ ಗೆ ಗುರಿಯಾಯಿತು.
ಹೈದ್ರಾಬಾದ್ 19.4 ಎಸೆತದಲ್ಲಿ 153 ರನ್ ಗಳಿಸಿತು.
ಚಹಲ್ ಗೇಮ್ ಚೇಂಜರ್:
ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ ಚಹಲ್ ಆರ್ ಸಿಬಿಗೆ ಗೆಲುವು ತಂದು ಕೊಟ್ಟರು. 3 ವಿಕೆಟ್ ಪಡೆದ ಚಹಲ್, 4 ಓವರ್ ಗಳಲ್ಲಿ ಕೇವಲ 18 ರನ್ ನೀಡಿದರು. ಮನೀಶ್ ಪಾಂಡೆ, ಬೇರ್ ಸ್ಟೋ ಹಾಗೂ ವಿಜಯ್ ಶಂಕರ್ ಅವರ ವಿಕೆಟ್ ಪಡೆಯುವ ಮೂಲಕ ಚಹಲ್ ಪಂದ್ಯಕ್ಕೆ ಮಹತ್ವದ ತಿರುವು ನೀಡಿದರು.

ಇದಕ್ಕೂ ಮುನ್ನ ಆರ್ ಸಿಬಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಸದುಪಯೋಗ ಪಡೆದುಕೊಂಡಿತು.
ಪಡಿಕ್ಕಲ್ ಅರ್ಧಶತಕ:

ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂ ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆರ್ ಸಿಬಿ ಉತ್ತಮ ಆರಂಭ ಪಡೆಯಿತು. ಪಾದಾರ್ಪಣೆ ಪಂದ್ಯ ಆಡುತ್ತಿರುವ ಕರ್ನಾಟಕ ದ ದೇವದತ್ ಪಡಿಕ್ಕಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಫಿಂಚ್, ಹೈದ್ರಾಬಾದ್ ಬೌಲರ್ ಗಳನ್ನು ಸಮರ್ಥ ವಾಗಿ ಎದುರಿಸಿದರು. ಮೊದಲ ಪವರ್ ಪ್ಲೇನಲ್ಲಿ ಆರ್ ಸಿಬಿ ವಿಕೆಟ್ ನಷ್ಟವಿಲ್ಲದೆ 53 ರನ್ ಗಳಿಸಿತು. ಆಕರ್ಷಕ ಬ್ಯಾಟಿಂಗ್ ಮೂಲಕ ಗಮನಸೆಳೆದ ಪಡಿಕ್ಕಲ್, 8 ಬೌಂಡರಿ ಯೊಂದಿಗೆ 56 ರನ್ ಗಳಿಸಿದರು.
ಆರ್ ಸಿಬಿ ಪರ ಪಾದಾರ್ಪಣೆ ಪಂದ್ಯದಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರ ಎಂಬ ಶ್ರೇಯಕ್ಕೆ ಪಡಿಕ್ಕಲ್ ಪಾತ್ರರಾದರು. ಪಡಿಕ್ಕಲ್ ಔಟ್ ಆದ ನಂತರದ ಎಸೆತದಲ್ಲಿ ಫಿಂಚ್ (29) ಕೂಡಾ ನಿರ್ಗಮಿಸಿದರು.
ಮೊದಲ 10 ಓವರಲ್ಲಿ ಆರ್ ಸಿಬಿ 86 ರನ್ ಗಳಿಸಿತು. ಮೊದಲ 2 ವಿಕೆಟ್ ಉರುಳುತ್ತಿದ್ದ ಹಾಗೆ ಆರ್ ಸಿಬಿ ನಿಧಾನಗತಿಯ ಆಟವಾಡಿತು. ಇದರ ಪರಿಣಾಮವಾಗಿ 9 ಓವರ್ ನಿಂದ 15 ಓವರ್ ವರೆಗೆ 6 ಓವರ್ ಗಳಲ್ಲಿ ಆರ್ ಸಿಬಿ ಒಂದು ಬೌಂಡರಿ ಯನ್ನು ಗಳಿಸಲು ಸಾಧ್ಯವಾಗಲಿಲ್ಲ. ಹೈದ್ರಾಬಾದ್ ಬೌಲರ್‌ಗಳು ಕರಾರುವಕ್ ಬೌಲಿಂಗ್ ನಿಂದ ಆರ್ ಸಿಬಿ ಪಡೆ ರನ್ ಗಳಿಸಲು ಪರದಾಡಿತು. ನಾಯಕ ಕೊಹ್ಲಿ (14) ನಿರೀಕ್ಷಿತ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾದರು. ಕೊನೆಯಲ್ಲಿ ಡಿವಿಲಿಯರ್ಸ್ ಅಬ್ಬರದ ಬ್ಯಾಟಿಂಗ್ ನಡೆಸಿದ್ದರ ಪರಿಣಾಮವಾಗಿ ಆರ್ ಸಿಬಿ ಸವಾಲಿನ ಮೊತ್ತ ಸೇರಿಸುವಲ್ಲಿ ಯಶಸ್ವಿಯಾಯಿತು. ಡಿವಿಲಿಯರ್ಸ್ ಕೇವಲ 30 ಎಸೆತಗಳಲ್ಲಿ 51 ರನ್ ಗಳಿಸಿದರು. ಶಿವಂ ದುಬೆ (7) ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಆಲ್ರೌಂಡರ್ ವಿಭಾಗದಲ್ಲಿ ಸ್ಥಾನ ಪಡೆದಿರುವ ದುಬೆ, ನೀರಸ ಬ್ಯಾಟಿಂಗ್ ನಡೆಸಿದರು. ಕೊನೆಯ 10 ಓವರಲ್ಲಿ ಆರ್ ಸಿಬಿ 77 ರನ್ ಮಾತ್ರ ಗಳಿಸಿತು. ಅಂತಿಮವಾಗಿ ಆರ್ ಸಿಬಿ 20 ಓವರಲ್ಲಿ 5 ವಿಕೆಟ್ ಗೆ 163 ರನ್ ಗಳಿಸಿತು.
ಸ್ಕೋರ್ ವಿವರ
ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರಲ್ಲಿ 163/5
ದೇವದತ್ ಪಡಿಕ್ಕಲ್ ಬಿ ವಿಜಯ್ ಶಂಕರ್ 56(42)
ಆ್ಯರೋನ್ ಫಿಂಚ್ ಎಲ್ ಬಿ ಬಿ ಅಭಿಷೇಕ್ 29(27)
ವಿರಾಟ್ ಕೊಹ್ಲಿ ಸಿ ರಶೀದ್ ಖಾನ್ ಬಿ ನಟರಾಜನ್ 14(13)
ಡಿವಿಲಿಯರ್ಸ್ ರನೌಟ್ (ಮನೀಶ್/ಬೇರ್ ಸ್ಟೋ) 51(30)
ಶಿವಂ ದುಬೆ ರನೌಟ್ (ಬೇರ್ ಸ್ಟೋ) 07(08)
ಫಿಲಿಪ್ಪೆ ಅಜೇಯ 01(02)
ಇತರೆ : 05(ಲೆಗ್ ಬೈ 01, ವೈಡ್ 02, ನೋಬಾಲ್ 02)
ವಿಕೆಟ್ ಪತನ : 1-90(ದೇವದತ್), 2-90(ಫಿಂಚ್), 3-123(ಕೊಹ್ಲಿ), 4-162(ಡಿವಿಲಿಯರ್ಸ್), 5-163(ಶಿವಂ ದುಬೆ)
ಬೌಲಿಂಗ್: ಭುವನೇಶ್ವರ್ 4-0-25-0, ಸಂದೀಪ್ ಶರ್ಮಾ 4-0-36-0, ನಟರಾಜನ್ 4-0-34-1, ಮಿಚೆಲ್ ಮಾರ್ಶ್ 0.4-0-6-0, ವಿಜಯ್ ಶಂಕರ್ 1.2-0-14-1, ರಶೀದ್ ಖಾನ್ 4-0-31-0, ಅಭಿಷೇಕ್ ಶರ್ಮಾ 2-0-16-1

ಸನ್ ರೈಸರ್ಸ್ ಹೈದ್ರಾಬಾದ್ 19.4 ಓವರಲ್ಲಿ 153/10
ಡೇವಿಡ್ ವಾರ್ನರ್ ರನೌಟ್ (ಉಮೇಶ್) 06(06)
ಬೇರ್ ಸ್ಟೋ ಬಿ ಚಹಲ್ 61(43)
ಮನೀಶ್ ಪಾಂಡೆ ಸಿ ಸೈನಿ ಬಿ ಚಹಲ್ 34(33)
ಪ್ರಿಯಂ ಗರ್ಗ್ ಬಿ ಶಿವಂ ದುಬೆ 12(13)
ವಿಜಯ್ ಶಂಕರ್ ಬಿ ಚಹಲ್ 00(01)
ಅಭಿಷೇಕ್ ಶರ್ಮಾ ರನೌಟ್ (ಉಮೇಶ್/ಫಿಲಿಪ್ಪೆ) 07(04)
ರಶೀದ್ ಖಾನ್ ಬಿ ಸೈನಿ 06(05)
ಭುವನೇಶ್ವರ್ ಕುಮಾರ್ ಬಿ ಸೈನಿ 00(02)
ಸಂದೀಪ್ ಶರ್ಮಾ ಸಿ ಕೊಹ್ಲಿ‌ ಬಿ ಸ್ಟೇನ್ 09(06)
ಮಿಚೆಲ್ ಮಾರ್ಶ್ ಸಿ ಕೊಹ್ಲಿ ಬಿ ಶಿವಂ ದುಬೆ 00(01)
ನಟರಾಜನ್ ಅಜೇಯ 03(04)
ಇತರೆ : 15(ಬೈ 05, ಲೆಗ್ ಬೈ 02, ವೈಡ್ 08)
ವಿಕೆಟ್ ಪತನ : 1-18(ವಾರ್ನರ್), 2-89(ಮನೀಶ್), 3-121(ಬೇರ್ ಸ್ಟೋ), 4-121(ಶಂಕರ್), 5-129(ಪ್ರಿಯಂ ಗರ್ಗ್), 6-135(ಅಭಿಷೇಕ್), 7-141(ಭುವನೇಶ್ವರ್), 8-142(ರಶೀದ್), 9-143(ಮಿಚೆಲ್ ಮಾರ್ಶ್), 10-153(ಸಂದೀಪ್)
ಬೌಲಿಂಗ್: ಡೇಲ್ ಸ್ಟೇನ್ 3.4-0-33-1, ಉಮೇಶ್ ಯಾದವ್ 4-0-48-0, ನವದೀಪ್ ಸೈನಿ 4-0-25-2, ವಾಷಿಂಗ್ಟನ್ ಸುಂದರ್ 1-0-7-0, ಚಹಲ್ 4-0-18-3, ಶಿವಂ ದುಬೆ 3-0-15-2
ಪಂದ್ಯ ಶ್ರೇಷ್ಠ : ಯಜುವೇಂದ್ರ ಚಹಲ್