ಐಪಿಎಲ್: ಸನ್ ರೈಸರ್ಸ್ ವಿರುದ್ಧ ಗೆದ್ದು ಫೈನಲ್ ಗೇರಿದ ಡೆಲ್ಲಿ

ಅಬುಧಾಬಿ: ಡೆತ್ ಓವರಲ್ಲಿ ಮಾರಕ ಬೌಲಿಂಗ್ ದಾಳಿ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್, ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ 17 ರನ್ ಗಳ ಗೆಲುವು ಸಾಧಿಸಿತು.


ಇಂಡಿಯನ್ ಪ್ರೀಮಿಯರ್ ಲೀಗ್ 13 ನೇ ಆವೃತ್ತಿಯ ಕ್ವಾಲಿಫೈಯರ್ 2 ನೇ ಪಂದ್ಯದಲ್ಲಿ ಸೋತ ಹೈದ್ರಾಬಾದ್ ಟೂರ್ನಿಯಿಂದ ಹೊರಬಿದ್ದರೇ, ಡೆಲ್ಲಿ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತು.

ಕೇನ್ ಹೋರಾಟ ವ್ಯರ್ಥ:

190 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ಹೈದ್ರಾಬಾದ್ ಉತ್ತಮ ಆರಂಭ ಪಡೆಯಲಿಲ್ಲ. ನಾಯಕ ವಾರ್ನರ್ (2) ವೇಗಿ ರಬಾಡ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು. 2 ನೇ ವಿಕೆಟ್ ಗೆ ಪ್ರಿಯಂ ಗರ್ಗ್ ಹಾಗೂ ಮನೀಶ್ ಪಾಂಡೆ ಚೇತರಿಕೆ ನೀಡಿದರು. ಆದರೆ ಗರ್ಗ್ (17), ಮನೀಶ್ (21) ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಸೇರಿದರು. ಕೇವಲ 44 ರನ್ ಗಳಿಗೆ ಹೈದ್ರಾಬಾದ್ 3 ವಿಕೆಟ್ ಕಳೆದುಕೊಂಡು ‌ಸಂಕಷ್ಟಕ್ಕೆ ಸಿಲುಕಿತು.
ಈ ವೇಳೆ 4 ನೇ ವಿಕೆಟ್ ಗೆ ಜೊತೆಯಾದ ಕೇನ್ ವಿಲಿಯಮ್ಸನ್ ಹಾಗೂ ಜೇಸನ್ ಹೋಲ್ಡರ್ 46 ರನ್ ಗಳ ಜೊತೆಯಾಟ ದ ಕಾಣಿಕೆ ನೀಡಿತು. ಹೋಲ್ಡರ್ (11) ಬೇಗನೆ ನಿರ್ಗಮಿಸಿದರು. 5 ನೇ ವಿಕೆಟ್ ಗೆ ವಿಲಿಯಮ್ಸನ್ ಹಾಗೂ ಅಬ್ದುಲ್‌ ಸಮದ್ ಅರ್ಧಶತಕ ದ ಜೊತೆಯಾಟ ನೀಡಿದರು. ಈ ಇಬ್ಬರು ಕ್ರೀಸ್ ನಲ್ಲಿ ಇರುವವರೆಗೂ ಹೈದ್ರಾಬಾದ್ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿತ್ತು.
ವಿಲಿಯಮ್ಸನ್ 45 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ನೊಂದಿಗೆ 67 ರನ್ ಗಳಿಸಿದ್ದಾಗ ಸ್ಟೋಯ್ನಿಸ್ ಬೌಲಿಂಗ್ ನಲ್ಲಿ ರಬಾಡ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಆ ಬಳಿಕ ಹೈದ್ರಾಬಾದ್ ಕುಸಿತ ಕಂಡಿತು. 147 ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ಹೈದ್ರಾಬಾದ್ 21 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡಿತು. ಅಬ್ದುಲ್‌ ಸಮದ್ 16 ಎಸೆತಗಳಲ್ಲಿ 33 ರನ್ ಗಳಿಸಿ ಗಮನಸೆಳೆದರು.‌ ಹೈದ್ರಾಬಾದ್ 20 ಓವರಲ್ಲಿ 8 ವಿಕೆಟ್ ಗೆ 172 ರನ್ ಗಳಿಸಿ ಸೋಲಪ್ಪಿತು. ಡೆಲ್ಲಿ ಪರ ರಬಾಡ 4, ಸ್ಟೋಯ್ನಿಸ್ 3 ವಿಕೆಟ್ ಪಡೆದು ಮಿಂಚಿದರು.

ಧವನ್ ಅರ್ಧಶತಕ:

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ ಪಡೆಯಿತು. ಬ್ಯಾಟಿಂಗ್ ನಲ್ಲಿ ಬಡ್ತಿ ಪಡೆದ ಸ್ಟೋಯ್ನಿಸ್, ಧವನ್ ಜೊತೆಯಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಅಚ್ಚರಿ ಮೂಡಿಸಿದರು.


ಹೈದ್ರಾಬಾದ್ ತಂಡದ ಲೆಕ್ಕಾಚಾರವನ್ನು ಉಲ್ಟಾ ಮಾಡಿದ ಡೆಲ್ಲಿ ಆರಂಭಿಕರು ಭರ್ಜರಿ ಆರಂಭ ಒದಗಿಸಿದರು. ಮೊದಲ ವಿಕೆಟ್‌ ಗೆ ಈ ಜೋಡಿ 86 ರನ್ ಕಲೆಹಾಕಿತು. ಸ್ಟೋಯ್ನಿಸ್ (38) ರನ್ ಗಳಿಸಿದರು. 2 ನೇ ವಿಕೆಟ್ ಗೆ ಧವನ್ ಜೊತೆಯಾದ ಶ್ರೇಯಸ್ ಅಯ್ಯರ್ ಆಕರ್ಷಕ ಹೊಡೆತಗಳ ಮೂಲಕ ತಂಡದ ಮೊತ್ತ ಹೆಚ್ಚಿಸಿದರು. ಶ್ರೇಯಸ್ (21) ದೊಡ್ಡ ಇನ್ನಿಂಗ್ಸ್ ಆಡಲಿಲ್ಲ. ಬಿರುಸಿನ ಬ್ಯಾಟಿಂಗ್ ನಿಂದ ಗಮನಸೆಳೆದ ಧವನ್ 50 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ನೊಂದಿಗೆ 78 ರನ್ ಗಳಿಸಿದ್ದಾಗ, ವೇಗಿ ಸಂದೀಪ್ ಶರ್ಮಾ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು. ಕೊನೆಯಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ಹೆಟ್ಮೇಯರ್ 22 ಎಸೆತಗಳಲ್ಲಿ 42 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಡೆಲ್ಲಿ 20 ಓವರಲ್ಲಿ 3 ವಿಕೆಟ್ ಗೆ 189 ರನ್ ಗಳಿಸಿತು.

ಸ್ಕೋರ್ ವಿವರ
ಡೆಲ್ಲಿ ಕ್ಯಾಪಿಟಲ್ಸ್ 20 ಓವರಲ್ಲಿ 189/3
ಸ್ಟೋಯ್ನಿಸ್ ಬಿ ರಶೀದ್ 38(27)
ಧವನ್ ಎಲ್ ಬಿ ಬಿ ಸಂದೀಪ್ 78(50)
ಶ್ರೇಯಸ್ ಸಿ ಮನೀಶ್ ಬಿ ಹೋಲ್ಡರ್ 21(20)
ಹೆಟ್ಮೇಯರ್ ಅಜೇಯ 42(22)
ರಿಷಭ್ ಅಜೇಯ 02(03)
ಇತರೆ: 08(ಬೈ 01, ಲೆಗ್ ಬೈ 02, ನೋಬಾಲ್ 02, ವೈಡ್ 03)

ವಿಕೆಟ್ ಪತನ: 1-86(ಸ್ಟೋಯ್ನಿಸ್), 2-126(ಶ್ರೇಯಸ್), 3-178(ಧವನ್)

ಬೌಲಿಂಗ್: ಸಂದೀಪ್ 4-0-30-1, ಹೋಲ್ಡರ್ 4-0-50-1, ನದೀಮ್ 4-0-48-0, ರಶೀದ್ 4-0-26-1, ನಟರಾಜನ್ 4-0-32-0

ಸನ್ ರೈಸರ್ಸ್ ಹೈದ್ರಾಬಾದ್ 20 ಓವರಲ್ಲಿ 172/8
ಗರ್ಗ್ ಬಿ ಸ್ಟೋಯ್ನಿಸ್ 17(12)
ವಾರ್ನರ್ ಬಿ ರಬಾಡ 02(03)
ಮನೀಶ್ ಸಿ ನೋಕಿಯೆ ಬಿ ಸ್ಟೋಯ್ನಿಸ್ 21(14)
ವಿಲಿಯಮ್ಸನ್ ಸಿ ರಬಾಡ ಬಿ ಸ್ಟೋಯ್ನಿಸ್ 67(45)
ಹೋಲ್ಡರ್ ಸಿ ದುಬೆ ಬಿ ಅಕ್ಷರ್ 11(15)
ಸಮದ್ ಸಿ (ಸಬ್) ಪೌಲ್ ಬಿ ರಬಾಡ 33(16)
ರಶೀದ್ ಸಿ ಅಕ್ಷರ್ ಬಿ ರಬಾಡ 11(07)
ಗೋಸ್ವಾಮಿ ಸಿ ಸ್ಟೋಯ್ನಿಸ್ ಬಿ ರಬಾಡ 00(01)
ನದೀಮ್ ಅಜೇಯ 02(03)
ಸಂದೀಪ್ ಅಜೇಯ 02(04)
ಇತರೆ: 06(ಲೆಗ್ ಬೈ 01, ವೈಡ್ 05)
ವಿಕೆಟ್ ಪತನ: 1-12(ವಾರ್ನರ್), 2-43(ಗರ್ಗ್), 3-44(ಮನೀಶ್), 4-90(ಹೋಲ್ಡರ್), 5-147(ವಿಲಿಯಮ್ಸನ್) 6-167(ಸಮದ್), 7-167(ರಶೀದ್) 8-168(ಗೋಸ್ವಾಮಿ)

ಬೌಲಿಂಗ್: ಅಶ್ವಿನ್ 3-0-33-0, ರಬಾಡ 4-0-29-4, ನೋಕಿಯೆ 4-0-36-0, ಸ್ಟೋಯ್ನಿಸ್ 3-0-26-3, ಅಕ್ಷರ್ 4-0-33-1, ದುಬೆ 2-0-14-0

ಪಂದ್ಯ ಶ್ರೇಷ್ಠ: ಮಾರ್ಕಸ್ ಸ್ಟೋಯ್ನಿಸ್