ಐಪಿಎಲ್ ಫೈನಲ್ ಪಂದ್ಯ ಎರಡು ದಿನ ಮುಂದೂಡಿಕೆ ಸಾಧ್ಯತೆ

ಮುಂಬೈ, ಜು.30: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಫೈನಲ್ ಪಂದ್ಯ ನವೆಂಬರ್ 8ರ ಬದಲಿಗೆ 10ರಂದು ಮುಂದೂಡಿಕೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಅತ್ಯಂತ ಮುಖ್ಯವಾಗಿ ಐಪಿಎಲ್ ಪ್ರಸಾರಸಂಸ್ಥೆ ಸ್ಟಾರ್ ಇಂಡಿಯಾಕ್ಕೆ ದೀಪಾವಳಿಯ ವಾರವನ್ನು ಮತ್ತಷ್ಟು ಬಳಸಿಕೊಳ್ಳಲು ಅವಕಾಶ ನೀಡುವ ಸಲುವಾಗಿ ಟೂರ್ನಿಯ ಫೈನಲ್ ಪಂದ್ಯವನ್ನು ಎರಡು ದಿನಗಳ ಕಾಲ ಮುಂದೂಡಲು ಚಿಂತಿಸಲಾಗುತ್ತಿದೆ. ಈ ಕುರಿತು ಐಪಿಎಲ್ ಆಡಳಿತ ಮಂಡಳಿಯು ಮುಂದಿನ ಮೂರು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗಿದೆ.

ಒಂದು ವೇಳೆ ಫೈನಲ್ ಪಂದ್ಯ 2 ದಿನ ವಿಳಂಬವಾದರೆ, ಐಪಿಎಲ್ ಮುಗಿದ ಬೆನ್ನಿಗೆ ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ ಭಾರತಕ್ಕೆ ವಾಪಸಾಗದೆ ಯುಎಇಯಿಂದ ನೇರವಾಗಿ ಆಸ್ಟ್ರೇಲಿಯಕ್ಕೆ ಪ್ರಯಾಣಿಸಬೇಕಾಗುತ್ತದೆ.

ಐಪಿಎಲ್ ಸೆಪ್ಟಂಬರ್ 19ರಿಂದ ನವೆಂಬರ್ 8ರ ತನಕ ನಡೆಯಲಿದೆ ಎಂದು ಇತ್ತೀಚೆಗೆ ಬಿಡುಗಡೆಯಾಗಿರುವ ವೇಳಾಪಟ್ಟಿಯಲ್ಲಿ ತಿಳಿದುಬಂದಿತ್ತು. ಐಪಿಎಲ್ ಆಡಳಿತ ಮಂಡಳಿಯ ಸದಸ್ಯರು ಈವಾರಾಂತ್ಯದಲ್ಲಿ ಟೆಲಿಕಾನ್ಫರೆನ್ಸ್ ಮೂಲಕ ಸಭೆ ಸೇರಲಿದ್ದಾರೆ. ಅಂತಿಮ ಪಂದ್ಯದ ದಿನಾಂಕವನ್ನು 2 ಮುಂದೂಡುವ ನಿರ್ಧಾರ ಕೈಗೊಳ್ಳಲಿದೆ.ಹೀಗಾದಲ್ಲಿ ಐಪಿಎಲ್ 51 ದಿನಗಳ ಬದಲಿಗೆ 54 ದಿನಗಳ ಕಾಲ ನಡೆಯಲಿದೆ.