ಐಪಿಎಲ್: ಪ್ರಶಸ್ತಿಯ ಕನಸಿನಲ್ಲಿ ವಿರಾಟ್ ಪಡೆ, ಈ ಬಾರಿಯೂ ಮಧ್ಯಮ ಕ್ರಮಾಂಕದ್ದೇ ಚಿಂತೆ

ಬೆಂಗಳೂರು, ಸೆ.12 – ಸತತ 13 ಆವೃತ್ತಿಗಳಲ್ಲಿ ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ಎಡವಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಹೊಸ ಕನಸಿನೊಂದಿಗೆ ಯುಎಇಗೆ ತೆರಳಿದೆ. ಈ ಬಾರಿಯ ತಂಡ ಹೇಗಿದೆ, ತಂಡದ ಬಲಾಬಲ ಏನು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಆರ್ ಸಿಬಿ ತಂಡದಲ್ಲಿ ಸ್ಟಾರ್ ಅಂತಾರಾಷ್ಟ್ರೀಯ ಆಟಗಾರರು ಇದ್ದು ತಂಡಕ್ಕೆ ಬಲ ತುಂಬಿದ್ದಾರೆ. ಈ ತಂಡದ ಬ್ಯಾಟಿಂಗ್ ಬಲಾಢ್ಯವಾಗಿದೆ. ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ತಂಡದ ಪ್ರಮುಖ ಬ್ಯಾಟಿಂಗ್ ಬೆನ್ನೆಲಬು. ತಂಡಕ್ಕೆ ಈ ಬಾರಿ ಏರಾನ್ ಫಿಂಚ್ ಸೇರಿಕೊಂಡಿದ್ದು, ತಂಡದ ಬ್ಯಾಟಿಂಗ್ ವಿಭಾಗವನ್ನು ಬಲ ಪಡಿಸಿದೆ. ಅಲ್ಲದೆ ಆರ್ ಸಿಬಿ ತಂಡದಲ್ಲಿ ಸ್ಟಾರ್ ದೇಶಿಯ ಆಟಗಾರರು ಇದ್ದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ಉಳಿದಂತೆ ಕೆಳ ಮಧ್ಯಮ ಕ್ರಮಾಂಕದಲ್ಲಿ ಆಲ್ ರೌಂಡರ್ ಮೋಯಿನ್ ಅಲಿ, ಶಿವಮ್ ದುಬೆ ತಮ್ಮ ಬ್ಯಾಟಿಂಗ್ ಮೂಲಕ ಕಾಣಿಕೆ ನೀಡಬಲ್ಲರು. ಕಳೆದ ಆವೃತ್ತಿಯಲ್ಲಿ ಅಲಿ ಉತ್ತಮವಾಗಿ ಬ್ಯಾಟ್ ಮಾಡಿ ರನ್ ಕಲೆ ಹಾಕಿ ಭರವಸೆ ಮೂಡಿಸಿದ್ದಾರೆ. ಇನ್ನು ಕ್ರಿಸ್ ಮೋರಿಸ್ ಸಹ ತಂಡಕ್ಕೆ ನೆರವಾಗಬಲ್ಲ ಆಟಗಾರ. ಇನ್ನು ದೇಶಿಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಕನ್ನಡಿಗ ದೇವದತ್ ಪಡಿಕ್ಕಲ್ ಮೇಲೆ ಭರವಸೆ ಇಡಲಾಗಿದೆ.

ಆರ್‌ಸಿಬಿ ತಮ್ಮ ಬೌಲಿಂಗ್ ಸಂಯೋಜನೆಯನ್ನು ಸರಿಯಾಗಿ ಹೊಂದಿಸಿಕೊಂಡಂತೆ ಕಾಣುತ್ತಿಲ್ಲ. ಕಳೆದ ಕೆಲವು ಆವೃತ್ತಿಗಳಲ್ಲಿ ಸ್ಟಾರ್ ಬೌಲರ್ ಗಳನ್ನು ಹೊಂದದೆ ಪರದಾಡಿದ್ದ, ಆರ್ ಸಿಬಿ ಈ ಬಾರಿಯೂ ಅದೇ ತಪ್ಪನ್ನು ಮಾಡಿದೆ. ಡೇಲ್ ಸ್ಟೇನ್ ತಂಡದಲ್ಲಿದ್ದು, ಇವರಿಗೆ ಫಿಟ್ನೆಸ್ ಸಮಸ್ಯೆ ಕಾಡುತ್ತದೆ. ಇನ್ನು ಉಮೇಶ್ ಯಾದವ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಉಳಿದಂತೆ ಸೈನಿ ಹಾಗೂ ಸಿರಾಜ್ ಬಿಗುವಿನ ದಾಳಿ ನಡೆಸಿ ವಿಕೆಟ್ ಕಬಳಿಸಬೇಕಿದೆ.

ಇನ್ನು ಈ ಬಾರಿ ಯಜುವೇಂದ್ರ ಚಹಾಲ್ ಅವರೊಂದಿಗೆ ಸ್ಪಿನ್ ವಿಭಾಗದ ನೊಗವನ್ನು ಹೊರಲು ಆಡಂ ಜಂಪಾ ತಯಾರಾಗಿದ್ದಾರೆ.

ಈ ಬಾರಿಯೂ ಆರ್ ಸಿಬಿ ತಂಡಕ್ಕೆ ಮಧ್ಯಮ ಕ್ರಮಾಂಕ ತಲೆ ನೋವಾಗಿ ಪರಿಣಮಿಸಿದೆ. ಕೊಹ್ಲಿ, ಎಬಿಡಿ, ಫಿಂಚ್ ಔಟ್ ಆದರೆ, ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯನ್ನು ತೆಗೆದುಕೊಂಡು ಆಡುವ ಹೊಣೆ ಯಾರದ್ದು ಎಂಬ ಪ್ರಶ್ನೆ ಇದೆ.

ಈ ತಂಡವನ್ನು ನೋಡಿದರೆ ನಾಕೌಟ್ ಹಂತ ತಲುಪಬಹುದು ಎಂದು ಕೆಲವರು ಅಂದಾಜಿಸಿದರೆ, ಇನ್ನು ಹಲವರು ಈ ಬಾರಿಗೆ ವಿರಾಟ್ ಪಡೆ ಪ್ರಶಸ್ತಿಗೆ ಮುತ್ತಿಡಲಿದೆ ಎಂದು ತಿಳಿಸಿದ್ದಾರೆ.

ತಂಡ: ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಗುರ್ ಕೀರತ್ ಮನ್ ಸಿಂಗ್, ಮೊಯೀನ್ ಅಲಿ, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಪಾರ್ಥಿವ್ ಪಟೇಲ್, ಪವನ್ ನೇಗಿ, ಶಿವಮ್ ದುಬೆ, ಉಮೇಶ್ ಯಾದವ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಏರನ್ ಫಿಂಚ್, ಕ್ರಿಸ್ ಮೊರಿಸ್, ಪವನ್ ದೇಶಪಾಂಡೆ, ಡೇಲ್ ಸ್ಟೇನ್, ಶಹಬಾಜ್ ಅಹಮದ್, ಇಸುರು ಉದಾನಾ, ಆಡಮ್ ಜಂಪಾ