ಐಪಿಎಲ್: ಪಂಜಾಬ್ ವಿರುದ್ಧ ರಾಜಸ್ಥಾನಕ್ಕೆ 7 ವಿಕೆಟ್ ಗಳ ಭರ್ಜರಿ ಗೆಲುವು

ಅಬುಧಾಬಿ: ಬೆನ್ ಸ್ಟೋಕ್ಸ್ ಆಲ್ರೌಂಡರ್ ಆಟದ ನೆರವಿನಿಂದ ರಾಜಸ್ಥಾನ ರಾಯಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 7 ವಿಕೆಟ್ ಗಳ ಗೆಲುವು ಸಾಧಿಸಿತು.

ಈ ಜಯದೊಂದಿಗೆ ರಾಜಸ್ಥಾನ ಪ್ಲೇ ಆಫ್ ಆಸೆಯನ್ನು ಜೀವಂತ ಇರಿಸಿಕೊಂಡಿದೆ. ಸೋತ ಪಂಜಾಬ್ ಪ್ಲೇ ಆಫ್ ಹಾದಿ ಕಷ್ಟವಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 13 ನೇ ಆವೃತ್ತಿಯಲ್ಲಿ ರಾಜಸ್ಥಾನ 13 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿ, 12 ಅಂಕಗಳಿಸಿ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ. ಭಾನುವಾರ ರಾಜಸ್ಥಾನ ತಂಡ, ಕೆಕೆಆರ್ ವಿರುದ್ಧ ಕೊನೆಯ ಪಂದ್ಯವನ್ನಾಡಲಿದೆ.

ಸ್ಟೋಕ್ಸ್ ಅರ್ಧಶತಕ:

186 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ರಾಯಲ್ಸ್ ಭರ್ಜರಿ ಆರಂಭ ಪಡೆಯಿತು. ಮೊದಲ ಪವರ್ ಪ್ಲೇ ನಲ್ಲಿ ಬೆನ್‌ ಸ್ಟೋಕ್ಸ್ ಹಾಗೂ ರಾಬಿನ್ ಉತ್ತಪ್ಪ, ಪಂಜಾಬ್ ಬೌಲರ್ ಗಳ ಬೆವರಿಳಿಸಿದರು. ಮೊದಲ ವಿಕೆಗೆ ಈ ಜೋಡಿ ಬರೋಬ್ಬರಿ 60 ರನ್ ಕಲೆಹಾಕಿತು. ಸ್ಟೋಕ್ಸ್ ಕೇವಲ 26 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ನೊಂದಿಗೆ 50 ರನ್‌ಗಳಿಸಿದರು. 2 ನೇ ವಿಕೆಟ್ ಗೆ ಉತ್ತಪ್ಪ ಹಾಗೂ ಸಂಜು ವೇಗದ ಬ್ಯಾಟಿಂಗ್ ರಾಯಲ್ಸ್ ಮೊತ್ತವನ್ನು ಹೆಚ್ಚಿಸಿತು. ಉತ್ತಪ್ಪ (30) ರನ್ ಗಳಿಸಿದರು. 25 ಎಸೆತಗಳಲ್ಲಿ 48 ರನ್ ಚಚ್ಚಿದ ಸಂಜು, ಇಲ್ಲದ ರನ್‌ ಕದಿಯಲು ಹೋಗಿ ರನೌಟ್ ಗೆ ಬಲಿಯಾದರು.

ಮುರಿಯದ 4 ನೇ ವಿಕೆಟ್‌ ಗೆ ಜೊತೆಯಾದ ನಾಯಕ ಸ್ಟೀವ್ ಸ್ಮಿತ್ ಹಾಗೂ ಜೋಸ್ ಬಟ್ಲರ್ 41 ರ‌ನ್ ಗಳ ಜೊತೆಯಾಟ ನೀಡಿದರು. ಸ್ಮಿತ್ (31), ಬಟ್ಲರ್ (22) ರನ್‌ಗಳಿಸಿ ಅಜೇಯರಾಗುಳಿದರು. ರಾಜಸ್ಥಾನ 17.3 ಓವರಲ್ಲಿ 3 ವಿಕೆಟ್ ಗೆ 186 ರನ್ ಗಳಿಸುವ ಮೂಲಕ ಜಯದ ನಗೆ ಬೀರಿತು.


ಗೇಲ್ ಅಬ್ಬರ ವ್ಯರ್ಥ:


ಇದಕ್ಕೂ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಗೆ ವೇಗಿ ಆರ್ಚರ್ ಆಘಾತ ನೀಡಿದರು. ಮಂದೀಪ್ ಸಿಂಗ್ (0) ತಾವು ಎದುರಿಸಿದ ಮೊದಲ ಎಸೆತದಲ್ಲಿ ಸ್ಟೋಕ್ಸ್ ಹಿಡಿದ ಅದ್ಭುತ ಕ್ಯಾಚ್ ಗೆ ವಿಕೆಟ್‌ ಕೈ ಚೆಲ್ಲಿ ಹೊರನಡೆದರು. 1 ರನ್ ಗಳಿಸುವಷ್ಟರಲ್ಲಿ ಪಂಜಾಬ್ 1 ವಿಕೆಟ್ ಕಳೆದುಕೊಂಡಿತು.
ನಂತರ 2 ನೇ ವಿಕೆಟ್ ಗೆ ನಾಯಕ ರಾಹುಲ್ ಜೊತೆಯಾದ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಆರಂಭದಿಂದಲೂ ಅಬ್ಬರದ ಬ್ಯಾಟಿಂಗ್ ನಡೆಸಿದರು. ರಾಯಲ್ಸ್ ಬೌಲರ್ ಗಳನ್ನು ದಂಡಿಸಿದ ಗೇಲ್, ತಂಡದ ಮೊತ್ತ ಹೆಚ್ಚಿಸಿದರು. 2 ನೇ ವಿಕೆಟ್ ಗೆ ರಾಹುಲ್ ಹಾಗೂ ಗೇಲ್ 120 ರನ್ ಗಳ ಜೊತೆಯಾಟ ನೀಡಿದರು. ಜವಾಬ್ದಾರಿ ಯುತ ಇನ್ನಿಂಗ್ಸ್ ಆಡಿದ ರಾಹುಲ್ (46) ಸ್ಟೋಕ್ಸ್ ಗೆ ವಿಕೆಟ್ ಒಪ್ಪಿಸಿದರು. 3ನೇ ವಿಕೆಟ್‌ ಗೆ ಗೇಲ್ ಜೊತೆಯಾದ ನಿಕೋಲಸ್ ಪೂರನ್ 41 ರನ್ ಗಳ ಜೊತೆಯಾಟ ದ ಕಾಣಿಕೆ ನೀಡಿದರು. ಪೂರನ್ ಕೇವಲ 10 ಎಸೆತಗಳಲ್ಲಿ ಭರ್ಜರಿ 3 ಸಿಕ್ಸರ್ ಬಾರಿಸುವ ಮೂಲಕ 22 ರನ್ ಗಳಿಸಿದರು.
ಭರ್ಜರಿ ಬ್ಯಾಟಿಂಗ್ ನಡೆಸಿದ ಗೇಲ್, 63 ಎಸೆತಗಳಲ್ಲಿ 6 ಬೌಂಡರಿ, 8 ಸಿಕ್ಸರ್ ನೊಂದಿಗೆ 99 ರನ್ ಗಳಿಸಿದರು. ಕೇವಲ 1 ರನ್ ನಿಂದ ಶತಕ‌ವಂಚಿತರಾದರು.‌
ಅಂತಿಮವಾಗಿ ಪಂಜಾಬ್ 20 ಓವರಲ್ಲಿ 4 ವಿಕೆಟ್ ಗೆ 185 ರನ್ ಗಳಿಸಿತು.


ಸ್ಕೋರ್ ವಿವರ
ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರಲ್ಲಿ 185/4
ರಾಹುಲ್ ಸಿ ತೇವಾಟಿಯ ಬಿ ಸ್ಟೋಕ್ಸ್ 46(41)
ಮಂದೀಪ್ ಸಿ ಸ್ಟೋಕ್ಸ್ ಬಿ ಆರ್ಚರ್ 00(01)
ಗೇಲ್ ಸಿ ತೇವಾಟಿಯ ಬಿ ಸ್ಟೋಕ್ಸ್ 99(63)
ಪೂರನ್ ಸಿ ತೇವಾಟಿಯ ಬಿ ಸ್ಟೋಕ್ಸ್ 22(10)
ಮ್ಯಾಕ್ಸ್‌ವೆಲ್ ಅಜೇಯ 06(06)
ಹೂಡಾ ಅಜೇಯ 01(01)
ಇತರೆ: 11(ಲೆಗ್ ಬೈ 01, ನೋಬಾಲ್ 02, ವೈಡ್ 08)

ವಿಕೆಟ್‌ ಪತನ: 1-1(ಮಂದೀಪ್), 2-121(ರಾಹುಲ್), 3-162(ಪೂರನ್), 4-184(ಗೇಲ್)

ಬೌಲಿಂಗ್: ಆರ್ಚರ್ 4-0-26-2, ಆ್ಯರೋನ್ 4-0-47-0, ತ್ಯಾಗಿ 4-0-47-0, ಶ್ರೇಯಸ್ ಗೋಪಾಲ್ 1-0-10-0, ಸ್ಟೋಕ್ಸ್ 4-0-32-2, ತೇವಾಟಿಯ 3-0-22-0

ರಾಜಸ್ಥಾನ ರಾಯಲ್ಸ್ 17.3 ಓವರಲ್ಲಿ 186/3
ಉತ್ತಪ್ಪ ಸಿ ಪೂರನ್ ಬಿ ಅಶ್ವಿನ್ 30(23)
ಸ್ಟೋಕ್ಸ್ ಸಿ ಹೂಡಾ ಬಿ ಜೋರ್ಡನ್ 50(26)
ಸಂಜು ರನೌಟ್ ಸಬ್ (ಸುಚಿತ್) 48(25)
ಸ್ಮಿತ್ ಅಜೇಯ 31(20)
ಬಟ್ಲರ್ ಅಜೇಯ 22(11)
ಇತರೆ: 05(ಲೆಗ್ ಬೈ 02, ವೈಡ್ 03)

ವಿಕೆಟ್ ಪತನ: 1-60(ಸ್ಟೋಕ್ಸ್), 2-111(ಉತ್ತಪ್ಪ), 3-145(ಸಂಜು)

ಬೌಲಿಂಗ್: ಆರ್ಶ್ ದೀಪ್ 3-0-34-0, ಶಮಿ 3-0-36-0, ಅಶ್ವಿನ್ 4-0-43-1, ಜೋರ್ಡನ್ 3.3-0-44-1, ಬಿಷ್ಣೋಯಿ 4-0-27-0

ಪಂದ್ಯ ಶ್ರೇಷ್ಠ: ಬೆನ್ ಸ್ಟೋಕ್ಸ್