ಐಪಿಎಲ್ ದಾಖಲೆ ಮಾಡಿದ ಪಡಿಕ್ಕಲ್

ಅಬುಧಾಬಿ, ನ ೩ -ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅರ್ಧಶತಕ ಸಿಡಿಸಿ ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ದಾಖಲೆಗಳನ್ನು ಹಿಂದಿಕ್ಕಿದರು.
ಪದಾರ್ಪಣೆ ಆವೃತ್ತಿಯಲ್ಲಿಯೇ ಅತಿ ಹೆಚ್ಚು ಅರ್ಧಶತಕಗಳನ್ನು ಸಿಡಿಸಿದ ರಾಷ್ಟ್ರೀಯ ತಂಡ ಪ್ರತಿನಿಧಿಸದ ಆಟಗಾರ ಎಂಬ ದಾಖಲೆಯನ್ನು ದೇವದತ್ ಪಡಿಕ್ಕಲ್ ಮಾಡಿದರು. ಅವರು ಪ್ರಸಕ್ತ ಆವೃತ್ತಿಯಲ್ಲಿ ೧೪ ಇನಿಂಗ್ಸ್‌ಗಳಿಂದ ಐದು ಅರ್ಧಶತಕಗಳನ್ನು ಮಾಡಿದ್ದಾರೆ. ಈ ಹಿಂದೆ ೨೦೦೮ರಲ್ಲಿ ಶಿಖರ್ ಧವನ್(೪ ಅರ್ಧಶತಕಗಳು) ಹಾಗೂ ೨೦೧೪ರಲ್ಲಿ ಶ್ರೇಯಸ್ ಅಯ್ಯರ್ (೪ ಅರ್ಧಶತಕಗಳು) ಅವರು ಮಾಡಿದ್ದ ಜಂಟಿ ದಾಖಲೆಯನ್ನು ಕನ್ನಡಿಗ ಮುರಿದರು.
ದೇವದತ್ ಪಡಿಕ್ಕಲ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ೪೦ ಎಸೆತಗಳಿಗೆ ಅರ್ಧಶತಕ ಸಿಡಿಸಿದರು. ತಮ್ಮ ಮೊದಲ ಐಪಿಎಲ್ ಆವೃತ್ತಿಯಲ್ಲಿಯೇ ತಮ್ಮ ಸಾಮರ್ಥ್ಯವನ್ನು ಪಡಿಕ್ಕಲ್ ಸಾಬೀತುಪಡಿಸಿದ್ದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಚೊಚ್ಚಲ ಅರ್ಧಶತಕ ಸಿಡಿಸಿದ ಬಳಿಕ ತಮ್ಮ ವಿಶ್ವಾಸವನ್ನು ಉತ್ತಮ ಪಡಿಸಿಕೊಂಡರು.
ಸೋಮವಾರ ಅರ್ಧಶತಕದೊಂದಿಗೆ ದೇವದತ್ ಪಡಿಕ್ಕಲ್ ಆರ್‌ಸಿಬಿಯಲ್ಲಿ ಪ್ರಸಕ್ತ ಆವೃತ್ತಿಯ ಗರಿಷ್ಠ ಮೊತ್ತ ಗಳಿಸಿದ್ದ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದರು. ಅವರು ಇದೀಗ ೧೪ ಇನಿಂಗ್ಸ್‌ಗಳಲ್ಲಿ ೩೩.೭೧ ರ ಸರಾಸರಿಯಲ್ಲಿ ೪೭೨ ರನ್‌ಗಳನ್ನು ಗಳಿಸಿದ್ದಾರೆ. ಪದಾರ್ಪಣೆ ಆವೃತ್ತಿಯಲ್ಲಿ ೫೭ ಬೌಂಡರಿಗಳು ಹಾಗೂ ಎಂಟು ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.